ADVERTISEMENT

ಶಹಾಪುರ | ವರುಣನ ಅರ್ಭಟಕ್ಕೆ ನಲುಗಿದ ಭತ್ತ: ವಾಯುಭಾರ ಕುಸಿತದಿಂದ ಕಂಗೆಟ್ಟ ರೈತರು

ಟಿ.ನಾಗೇಂದ್ರ
Published 28 ಅಕ್ಟೋಬರ್ 2025, 7:00 IST
Last Updated 28 ಅಕ್ಟೋಬರ್ 2025, 7:00 IST
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಸುಂಕ ಕಟ್ಟುವ ಹಂತದಲ್ಲಿರುವ ಭತ್ತ ಬೆಳೆ
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಸುಂಕ ಕಟ್ಟುವ ಹಂತದಲ್ಲಿರುವ ಭತ್ತ ಬೆಳೆ   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತ ಬೆಳೆಯು ಸುಂಕ ಹಾಗೂ ಕಾಳು ಕಟ್ಟುವ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರಿವ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಯು ಸಂಕಷ್ಟಕ್ಕೆ ಸಿಲುಕಿದೆ. ಭತ್ತ ನೆಲಕ್ಕೆ ಉರುಳುವುದರ ಜತೆಗೆ ಜೊಳ್ಳು ಆಗುವ ಭೀತಿ ರೈತನ್ನು ಕಾಡುತ್ತಿದೆ.

ನಗರದಲ್ಲಿ ಸೋಮವಾರ ಬೆಳಿಗ್ಗೆ ಧೋ ಎನ್ನುವಂತೆ ಧಾರಾಕಾರವಾಗಿ ಮಳೆ ಸುರಿಯಿತು. ತಗ್ಗು ಪ್ರದೇಶದ ಜಮೀನುಗಳಿಗೆ ಮತ್ತೆ ನೀರು ಸಂಗ್ರಹಗೊಂಡಿತು. ಭತ್ತ ಇನ್ನು ಒಂದು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈಗ ಭತ್ತಕ್ಕೆ ಮಳೆ ಅಗತ್ಯವಿಲ್ಲ. ಮಳೆ ಹನಿಯು ಭತ್ತದ ಮೇಲೆ ರಭಸವಾಗಿ ಬಿಳುವುದರಿಂದ ಅದರ ಸತ್ವ ಕಡಿಮೆಯಾಗುತ್ತದೆ. ಈಗಾಗಲೇ ಶೇ 40ರಷ್ಟು ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತ ಸೂರ್ಯನಾರಾಯಣರೆಡ್ಡಿ.

ಪ್ರಸಕ್ತ ವರ್ಷ ಹದಭರಿತ ಮಳೆ ಭತ್ತಕ್ಕೆ ಹೆಚ್ಚು ಅನುಕೂಲವಾಗಿದೆ. ಬೆಳೆ ಸಮೃದ್ಧಿಯಾಗಿ ಬಂದಿದೆ. ಕಾಳು ಕಟ್ಟುವ ಹಂತದಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ ಎನ್ನುವ ನಮ್ಮ ನಿರೀಕ್ಷೆ ಹುಸಿಯಾಗಿದೆ. ವಾಯುಭಾರ ಕುಸಿತವು ರೈತರ ನೆಮ್ಮದಿಯನ್ನು ಕಸಿದುಕೊಂಡಿದೆ. ಅಲ್ಲದೆ ಹಿಂಗಾರು ಹಂಗಾಮಿನ ಬೆಳೆಗಳಿಗೂ ವಾಯುಭಾರ ಅಡ್ಡಗಾಲು ಹಾಕಿದಂತಾಗಿದೆ ಎಂದು ರೈತ ಸಂಘದ ಮುಖಂಡ ಭೀಮರಾಯ ತಿಳಿಸಿದರು.

ADVERTISEMENT

ಈಗಾಗಲೇ ಹತ್ತಿ ಕೀಳಬೇಕು ಎನ್ನುವರಿಗೆ ತಣ್ಣಿರು ಎರಚಿರುವ ವಾಯುಭಾರ ಕುಸಿತ. ಹತ್ತಿಯು ಗಿಡದಲ್ಲಿಯೇ ಕಪ್ಪಿಟ್ಟಿದೆ. ತಂಪು ಜಾಸ್ತಿಯಾಗಿ ಕಾಯಿ ಕೊಳೆತಿವೆ. ಈಗ ಭತ್ತ ಹಾನಿಯಾಗುವ ಸರದಿ ಬಂದಿದೆ. ನಮಗೆ ದಿಕ್ಕು ತೋಚದಂತಾಗಿದೆ ಎಂದು ಭತ್ತ ಹಾಗೂ ಹತ್ತಿ ಬೆಳೆದ ರೈತರು ಅವಲತ್ತುಕೊಂಡಿದ್ದಾರೆ.

ಭತ್ತ ಬೆಳೆ ಸದ್ಯ ಕಾಳು ಕಟ್ಟುವ ದಿನಗಳು. ಅಕಾಲಿಕ ಮಳೆಯಿಂದ ಸುಂಕ ಉದುರಿಸಿ ಭತ್ತ ಜೊಳ್ಳು ಆಗುತ್ತಿದೆ
ಮಲ್ಲಿಕಾರ್ಜುನ ಸತ್ಯಂಪೇಟೆ ರೈತ ಮುಖಂಡ

ಮತ್ತೆ ಹೆಚ್ಚಿದ ಜೋರು ಮಳೆ

ತಾಲ್ಲೂಕಿನಲ್ಲಿ ಸೋಮವಾರ ಬೆಳಿಗ್ಗೆ ಮತ್ತೆ ಮಳೆ ಸುರಿದಿದೆ. ಅದರಂತೆ ಮಳೆ ಮಾಪನ ವರದಿಯಂತೆ ಶಹಾಪುರ ಹೋಬಳಿ ವ್ಯಾಪ್ತಿಯಲ್ಲಿ 20.2 ಮಿ.ಮೀ ಹಾಗೂ ದೋರನಹಳ್ಳಿ ಹೋಬಳಿ 6.8 ಗೋಗಿ ಹೋಬಳಿ 11 ಹಾಗೂ ಹಯ್ಯಾಳ ಹೋಬಳಿ 29 ಮಿ.ಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.