ADVERTISEMENT

ಶಹಾಪುರ | ಭತ್ತದ ಹುಲ್ಲಿಗೆ ಬೆಂಕಿ: ವಾಯು ಮಾಲಿನ್ಯ ಅಲ್ಲದೆ ಮಣ್ಣಿನ ಸತ್ವವೂ ನಾಶ

ಟಿ.ನಾಗೇಂದ್ರ
Published 16 ಡಿಸೆಂಬರ್ 2024, 5:06 IST
Last Updated 16 ಡಿಸೆಂಬರ್ 2024, 5:06 IST
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಕಟಾವು ಮಾಡಿದ ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾಗಿ ಹರಡಿದ್ದ ಹೊಗೆ
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಕಟಾವು ಮಾಡಿದ ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾಗಿ ಹರಡಿದ್ದ ಹೊಗೆ   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕಟಾವು ಮುಕ್ತಾಯವಾಗಿದೆ. ಗದ್ದೆಯಲ್ಲಿ ಬಿದ್ದಿರುವ ಹುಲ್ಲಿಗೆ ಬೆಂಕಿ ಹಚ್ಚುತ್ತಿರುವುದು ಸಾಮಾನ್ಯವಾಗಿದೆ. ಭೂ ಒಡಲಿಗೆ ಬೆಂಕಿ ಹಚ್ಚುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ ಎಂದು ಆತಂಕವನ್ನು ಕೃಷಿ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಹಂಗಾಮಿನ ಬೆಳೆ ಬಿತ್ತನೆ ಸಜ್ಜುಗೊಳಿಸುವ ಧಾವಂತದಲ್ಲಿ ಕಟಾವು ಮಾಡಿದ ಹುಲ್ಲನ್ನು ಬೇರೆಡೆ ಸ್ಥಳಾಂತರಿಸದೆ ಬೆಂಕಿ ಹಚ್ಚಿ ಬಿಡುತ್ತಾರೆ. ಇದರಿಂದ ಗದ್ದೆಯಲ್ಲಿನ ಜೀವಾಣುಗಳು ನಾಶವಾಗುವುದರ ಜತೆಗೆ ಮಣ್ಣಿನಲ್ಲಿರುವ ಸಾವಯವ ಇಂಗಾಲ ನಾಶವಾಗುತ್ತದೆ. ಇದರಿಂದ ಮಣ್ಣಿನ ಸತ್ವ ಕಳೆದುಕೊಂಡು ಸವಳು ಹಾಗೂ ಜವಳು ಭೂಮಿಯಾಗಿ ಪರಿವರ್ತನೆಯಾಗತ್ತದೆ.ರೈತರು ತಾಳ್ಮೆವಹಿಸಬೇಕು ಅವಸರದಲ್ಲಿ ಮಣ್ಣಿನ ಫಲವತ್ತತೆ ಹಾಳು ಮಾಡಬಾರದು ಎಂಬ ಸಲಹೆಯನ್ನು ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಡೀನ್ ಪ್ರಕಾಶ ಕುಚನೂರ ನೀಡಿದ್ದಾರೆ.

ಜಾನುವಾರುಗಳಿಗೆ ಮೇವು ಸಂಗ್ರಹಿಸಿಕೊಳ್ಳಬೇಕು. ಗದ್ದೆಯಲ್ಲಿಯೇ ಹುಲ್ಲು ಕೊಳೆಯುವಂತೆ ರಾಸಾಯನಿಕ ಔಷಧಿ ಸಿಂಪರಣೆ ಮಾಡಬೇಕು. ಇಲ್ಲವೆ ತಗ್ಗು ಪ್ರದೇಶದಲ್ಲಿ ಒಂದಡೆ ಕೂಡಿಹಾಕಿ ಕೊಳೆಯುವಂತೆ ಮಾಡಬೇಕು. ಯಾವತ್ತು ಹುಲ್ಲು ಸುಡಬಾರದು ಎನ್ನುತ್ತಾರೆ ಅವರು.

ADVERTISEMENT

ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಮಣ್ಣಿನ ಫಲವತ್ತೆತೆ ಹಾಳಾಗುವುದರ ಜತೆಗೆ ಪರಿಸರದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಭತ್ತದ ಹುಲ್ಲಿನ ಹೊಗೆಯು ಗಾಳಿಯಲ್ಲಿ ಮಿಶ್ರವಾಗಿ ವಾತಾವರಣ ಕಲುಷಿತವಾಗುತ್ತದೆ. ಅಲ್ಲದೆ ಉಸಿರಾಟದ ಸಮಸ್ಯೆಗೂ ನಾಂದಿಯಾಗುತ್ತದೆ. ಈಗ ಚಳಿಗಾಲವಾಗಿದ್ದರಿಂದ ಮಂಜಿನಲ್ಲಿ ಹೊಗೆ ಬೆರೆತು ಶ್ವಾಸಕೋಶದ ಸಮಸ್ಯೆಯು ಉಂಟಾಗಬಹುದು ಎನ್ನುತ್ತಾರೆ ವೈದ್ಯರು ಒಬ್ಬರು.

ಗದ್ದೆಯಲ್ಲಿ ಬಿದ್ದಿರುವ ಹುಲ್ಲು ಸಂಗ್ರಹಿಸಿ ಬೇರೆಡೆ ಹಾಕಲು ಸಾಕಷ್ಟು ಸಮಯಬೇಕು ಮತ್ತು ಕೂಲಿ ಕಾರ್ಮಿಕರ ಸಂಕಷ್ಟವನ್ನು ನಾವು ಎದುರಿಸುತ್ತಿದ್ದೇವೆ. ಪಟ್ಲರ್ ಹೊಡೆದು ಸಿದ್ಧಪಡಿಸಿದ ಸಸಿಯನ್ನು ಗದ್ದೆಯಲ್ಲಿ ನಾಟಿ ಮಾಡಬೇಕು. ಕೇವಲ 15 ದಿನದಲ್ಲಿ ತ್ವರಿತವಾಗಿ ಇದೆಲ್ಲ ಕಾರ್ಯವನ್ನು ಕೆಲಸ ಮುಗಿಸಿಕೊಳ್ಳಬೇಕು ಇಲ್ಲದೆ ಹೋದರೆ ನೀರಿನ ಬವಣೆ ಎದುರಿಸಬೇಕಾಗುತ್ತದೆ. ಅನಿವಾರ್ಯವಾಗಿ ಹುಲ್ಲಿಗೆ ಬೆಂಕಿ ಹಚ್ಚಿ ಸುಡುತ್ತಿದ್ದೇವೆ ಎನ್ನುತ್ತಾರೆ ರೈತ ವಲಸಿಗ ರೈತರು.

ಹುಲ್ಲು ಸುಡುವುದು ಪರಿಸರಕ್ಕೆ ಭೂಮಿಗೂ ಹಾನಿಕಾರಕ. ಭತ್ತದ ಹುಲ್ಲಿಗೆ ಬೆಂಕಿ ಹಚ್ಚಬಾರದು ಎಂದು ಬಗ್ಗೆ ಕೃಷಿ ಮಹಾ ವಿದ್ಯಾಲಯದಿಂದ ಅರಿವು ಹಾಗೂ ಜಾಗೃತಿ ಮೂಡಿಸಲಾಗುತ್ತದೆ
ಪ್ರಕಾಶ ಕುಚನೂರ ಡೀನ್ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯ
ಗದ್ದೆಯಲ್ಲಿ ಬಿದ್ದಿರುವ ಹಲ್ಲುನ್ನು ಸಂಗ್ರಹಿಸಿ ಇಡಲು ಸಮಯ ಹಾಗೂ ಹಣ ವೆಚ್ಚವಾಗುತ್ತದೆ. ತ್ವರಿತವಾಗಿ ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಜಮೀನು ಸಿದ್ಧಪಡಿಸಿಕೊಳ್ಳಬೇಕು. ಅನಿವಾರ್ಯವಾಗಿ ಹುಲ್ಲಿಗೆ ಬೆಂಕಿ ರೈತರು ಹಚ್ಚುತ್ತಾರೆ
ಸಿದ್ದಯ್ಯ ಹಿರೇಮಠ ರೈತ ಮುಖಂಡ
‘ದೆಹಲಿಗೆ ಆದ ದುಸ್ಥಿತಿ ನಮಗೂ ಬಂದಿತ್ತು’
ಹುಲ್ಲು ಸುಡುವುದರಿಂದ ಪರಿಸರದ ಮೇಲೆ ಹಾನಿಯಾಗುತ್ತಿರುವುದರಿಂದ ದೆಹಲಿ ಪಂಜಾಬ್ ಹರಿಯಾಣ ರಾಜ್ಯದಲ್ಲಿ ಹುಲ್ಲು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಮ್ಮಲ್ಲಿಯೂ ಮುಂದೆ ಅಂತಹ ದುಸ್ಥಿತಿ ಬರುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಹುಲ್ಲು ಸುಡುವುದನ್ನು ನಿಷೇಧಿಸಲು ಕಾನೂನು ಜಾರಿ ಮಾಡಬೇಕು. ಇಲ್ಲದೆ ಹೋದರೆ ದೆಹಲಿ ಆದ ದುಸ್ಥಿತಿ ನಮಗೂ ಬಂದಿತ್ತು ಎಂಬ ಎಚ್ಚರಿಕೆಯ ಗಂಟೆಯನ್ನು ಪರಿಸರ ಪ್ರೇಮಿ ಮಾನಪ್ಪ ಹಡಪದ ಬಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.