ADVERTISEMENT

ಗುರುಮಠಕಲ್: 4,108 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 1:22 IST
Last Updated 9 ಸೆಪ್ಟೆಂಬರ್ 2025, 1:22 IST
ಅಕ್ಕಿ
ಅಕ್ಕಿ   

ಗುರುಮಠಕಲ್ (ಯಾದಗಿರಿ ಜಿಲ್ಲೆ): ಇಲ್ಲಿನ ಲಕ್ಷ್ಮಿ ವೆಂಕಟೇಶ್ವರ ಮತ್ತು ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್‌ಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ₹1.17 ಕೋಟಿ ಮೌಲ್ಯದ 4,108 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ.

ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಆರೋಪದಡಿ ರೈಸ್ ಮಿಲ್ ಮಾಲೀಕರಾದ ನರೇಂದ್ರ ರಾಠೋಡ ಮತ್ತು ಅಯ್ಯಪ್ಪ ರಾಠೋಡ ವಿರುದ್ಧ ಆಹಾರ ಇಲಾಖೆ ಉಪನಿರ್ದೇಶಕ ಅನಿಲ್ ಕುಮಾರ ದೋವಳಗಿ ಅವರು ಗುರುಮಠಕಲ್ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ನರೇಂದ್ರ ಅವರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ತಂದೆಯಾ ಗಿದ್ದು, ಅಯ್ಯಪ್ಪ ಹಿರಿಯ ಸಹೋದರ .

ADVERTISEMENT

ಸೆಪ್ಟೆಂಬರ್ 5ರ ತಡರಾತ್ರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್‌ಪಿ ಪೃಥ್ವಿಕ್ ಶಂಕರ್ ನೇತೃತ್ವ ಅಧಿಕಾರಿಗಳ ತಂಡ ರೈಸ್ ಮಿಲ್‌ಗಳ ಮೇಲೆ ದಾಳಿ ನಡೆಸಿತ್ತು. ಪಡಿತರ ಅಕ್ಕಿಯ ಜತೆಗೆ ರೈತರಿಂದ ಖರೀಸಿದ್ದ ಸಾವಿರಾರು ಕ್ವಿಂಟಲ್‌ ಅಕ್ಕಿ ಮೂಟೆಗಳು ಪತ್ತೆ ಯಾಗಿದ್ದವು. ಪಡಿತರ ಅಕ್ಕಿಯನ್ನು ಪ್ರತ್ಯೇಕಿಸಿ ಅದರ ಮೌಲ್ಯ ಮತ್ತು ಪ್ರಮಾಣವನ್ನು ನಿರ್ಣಯಿಸಲು ಎರಡೂವರೆ ದಿನಗಳು ಬೇಕಾಯಿತು.

ದಾರಾ ಡಬಲ್ ಸ್ಟಾರ್, ಡೈನೆಸ್ಟಿ ಮತ್ತು ರಿಜ್ಸ್ ಮಾರ್ಕಾನಾ ಉತ್ಪನ್ನಗಳ ಹೆಸರಿನ ಅಕ್ಕಿಯ ಮೂಟೆಗಳು ಪತ್ತೆಯಾ ಗಿವೆ. ಪಡಿತರ ಅಕ್ಕಿಯನ್ನು ಕಾಳ ಸಂತೆ ಯಲ್ಲಿ ಖರೀದಿಸಿ, ಪಾಲಿಶ್ ಮಾಡಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌, ಹರಿಯಾಣ ಸೇರಿ ಇತರೆ ರಾಜ್ಯಗಳ ಸರ್ಕಾರಿ ಲೇಬಲ್ ಇರುವ ಪಡಿತರ ಚೀಲಗಳು ಸಹ ಪತ್ತೆಯಾಗಿವೆ. ಎರಡು ಸರಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿದೇಶಕ್ಕೆ ಮಾರಾಟವಾದ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಮೂಲಗಳು ಹೇಳಿವೆ.

ಇದು ಎರಡನೇ ಪ್ರಕರಣ: ಎರಡು ವರ್ಷಗಳ ಹಿಂದೆ ಶಹಾಪುರ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಉಗ್ರಾಣದಲ್ಲಿ ಇರಿಸಿದ್ದ ₹2.06 ಕೋಟಿ ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆಯಾಗಿತ್ತು. ಈ ಸಂಬಂಧ ಆಹಾರ ಇಲಾಖೆಯ ಡಿಡಿ ಸೇರಿ ಒಟ್ಟು 17 ಮಂದಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಮಣಿಕಂಠ ರಾಠೋಡ ಅದರಲ್ಲಿ ಆರೋಪಿಯಾಗಿದ್ದರು. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.

‘ವಿದೇಶಕ್ಕೆ ರವಾನೆ ಆಗುವುದು ಗೊತ್ತಿಲ್ಲ’

‘ಪಡಿತರ ಅಕ್ಕಿ ಪಾಲಿಶ್ ಮಾಡಿ, ಮಹಾರಾಷ್ಟ್ರಕ್ಕೆ ಒಯ್ದು ಮಾರಾಟ ಮಾಡುತ್ತಾರೆ ಎಂಬುದನ್ನು ಕೇಳಿದ್ದೆ. ಆದರೆ, ಹೊರದೇಶಕ್ಕೆ ಒಯ್ದು ಮಾರಾಟ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಸಿಂಗಪುರದವರು ನಮ್ಮಲ್ಲಿನ ಅಕ್ಕಿ ಏಕೆ ತಿನ್ನುತ್ತಾರೆ‌’ ಎಂದು ಸಚಿವ ಶರಣಬಸಪ್ಪ ದರ್ಶನಪುರ ಕೇಳಿದರು.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರಕರಣ ದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.