ಗುರುಮಠಕಲ್: ಪಟ್ಟಣದ ಹೊರವಲಯದ ಎರಡು ರೈಸ್ ಮಿಲ್‌ಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡವು, ಪತ್ತೆಯಾದ ಅಕ್ರಮ ಪಡಿತರ ಅಕ್ಕಿಯ ಪ್ರಮಾಣ ಮತ್ತು ಮೌಲ್ಯವನ್ನು ನಿರ್ಣಯಿಸಲು ಎರಡೂವರೆ ದಿನಗಳು ತೆಗೆದುಕೊಂಡರು.
ಲಕ್ಷ್ಮಿ ವೆಂಕಟೇಶ್ವರ ಮತ್ತು ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್‌ಗಳಲ್ಲಿ ಸಾವಿರಾರು ಮೂಟೆಗಳಲ್ಲಿ ಬಿದ್ದಿದ್ದ ಪಡಿತರ ಅಕ್ಕಿಯ ಪ್ರಮಾಣವು ಸೋಮವಾರ ಮಧ್ಯಾಹ್ನ ಗೊತ್ತಾಯಿತು. ಎರಡು ವರ್ಷಗಳ ಹಿಂದೆ ಸದ್ದು ಮಾಡಿದ್ದ ಶಹಾಪುರ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಉಗ್ರಾಣದಲ್ಲಿ ನಾಪತ್ತೆಯಾದ 6,077 ಕ್ವಿಂಟಲ್ ಪಡಿತರ ಅಕ್ಕಿ ಪ್ರಕರಣವನ್ನು ನೆನಪಿಸಿತು.
ನರೇಂದ್ರ ರಾಠೋಡ ಮತ್ತು ಆತನ ಮಗ ಅಯ್ಯಪ್ಪ ರಾಠೋಡ ಅವರಿಗೆ ಸೇರಿದ ರೈಸ್ ಮಿಲ್‌ಗಳಲ್ಲಿ ₹ 1.17 ಕೋಟಿ ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿವೆ ಎಂದು ಆರೋಪಿಸಿ ಆಹಾರ ಇಲಾಖೆ ಉಪನಿರ್ದೇಶಕ ಅನಿಲ್ ಕುಮಾರ ದೋವಳಗಿ ಅವರು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದಾಳಿಯಲ್ಲಿ 4,108 ಕ್ವಿಂಟಲ್ ಪಡಿತರ ಅಕ್ಕಿಯ ಜತೆಗೆ ಡೈನೆಸ್ಟಿ, ದಾರಾ ಡಬಲ್ ಸ್ಟಾರ್, ರಿಜ್ಸ್ ಮಾರ್ಕಾನಾ ಹೆಸರಿನ ಅಕ್ಕಿಯ ಮೂಟೆಗಳು ಹಾಗೂ ಅದೇ ಬ್ರ್ಯಾಂಡ್‌ನ 101 ಬಂಡಲ್‌ನ ಖಾಲಿ ಪ್ಲಾಸ್ಟಿಕ್ ಚೀಲಗಳ ಸಿಕ್ಕಿವೆ. ಎರಡು ಲಾರಿಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೋವಳಗಿ ಅವರು ದಾಳಿಯ ದಿನದಿಂದ ಸೋಮವಾರ ತಡರಾತ್ರಿ ಪ‍್ರಕರಣ ದಾಖಲಾಗುವವರೆಗೂ ಸ್ಥಳದಲ್ಲಿಯೇ ಇದ್ದರು. ಆರಂಭದಲ್ಲಿ ಸ್ಥಳೀಯವಾಗಿ ಕಾರ್ಮಿಕರು ಸಿಗದಕ್ಕೆ ಅಕ್ಕಿಯ ತೂಕ ಮತ್ತು ಮೌಲ್ಯ ಪರಿಶೀನೆಗೆ ಅಡ್ಡಿಯಾಯಿತು. ಯಾದಗಿರಿ ನಗರ ಮತ್ತು ಬೇರೆಡೆಯಿಂದ ಕಾರ್ಮಿಕರನ್ನು ಕರೆಸಿಕೊಂಡು ಎರಡೂವರೆ ದಿನ ಅಕ್ರಮದ ಮೌಲ್ಯವನ್ನು ಲೆಕ್ಕಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಿಲ್‌ಗಳಲ್ಲಿ ಸಾವಿರಾರು ಅಕ್ಕಿ ಮೂಟೆಗಳು ಬಿದ್ದಿದ್ದವು. ಅವುಗಳಲ್ಲಿ ಪಡಿತರ ಅಕ್ಕಿ ಮೂಟೆಗಳು ಹಾಗೂ ರೈತರಿಂದ ಖರೀದಿಸಿದ್ದ ಅಕ್ಕಿಯ ಮೂಟೆಗಳನ್ನು ಪ್ರತ್ಯೇಕಿಸಲಾಯಿತು. ಬಳಿಕ ಒಂದೊಂದೆ ಮೂಟೆಯನ್ನು ತೂಕ ಮಾಡಿ, ಅದರ ಬೆಲೆ ನಮೂದಿಸುವ ಕಾರ್ಯ ನಡೆಯಿತು. ಪ್ರತಿ ಕ್ವಿಂಟಲ್‌ನ ಮೌಲ್ಯವನ್ನು ಕ್ರೋಡೀಕರಣ ಮಾಡುತ್ತಾ ಹೋದಂತೆ ಅದು ಕೋಟಿ ರೂಪಾಯಿ ಗಡಿದಾಟಿತು. ಗ್ರಾಮ ಸೇವಕರು, ಕಂದಾಯ ಇಲಾಖೆ ಸಿಬ್ಬಂದಿ ಅಕ್ಕಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವಲ್ಲಿ ನೆರವಾದರು ಎಂದು ಹೇಳಿವೆ.
ದಾಳಿ ಮತ್ತು ಪರಶೀಲನೆಯಲ್ಲಿ ನಿರತವಾದ ಅಧಿಕಾರಿಗಳು, ಕಾರ್ಮಿಕರ ರಕ್ಷಣೆಗಾಗಿ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಶನಿವಾರ ಉಪವಿಭಾಗಾಧಿಕಾರಿ ಶಿಧರ ಗೋಟೂರು, ಡಿ.ವೈ.ಎಸ್. ಪಿ. ಸುರೇಶ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಿಲ್ ಸುತ್ತಮುತ್ತಲಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಬೇರೆಯವರು ಮಿಲ್ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ.
ಪ್ರಕರಣವನ್ನು ದಾಖಲಿಸಿಕೊಂಡು ಅಕ್ರಮ ಪಡಿತರ ಬಗ್ಗೆ ತನಿಖೆ ಮಾಡಲಾಗುವುದು. ಮುಂದಿನ ಹಂತವಾಗಿ ಆರೋಪಿಗಳ ವಿಚಾರಣೆಯೂ ನಡೆಸಲಾಗುವುದುಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.