ADVERTISEMENT

ಮಳೆ ನೀರಿಗೆ ಕೊಚ್ಚಿಹೋದ ಭತ್ತದ ನಾಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:08 IST
Last Updated 15 ಜುಲೈ 2020, 17:08 IST
ಯರಗೋಳ ಸಮೀಪದ ಚಾಮನಳ್ಳಿ ಗ್ರಾಮದ ಹೊಲಗಳಲ್ಲಿ ಮಳೆ ನೀರು
ಯರಗೋಳ ಸಮೀಪದ ಚಾಮನಳ್ಳಿ ಗ್ರಾಮದ ಹೊಲಗಳಲ್ಲಿ ಮಳೆ ನೀರು   

ಯರಗೋಳ: ಬುಧವಾರ ಸುರಿದ ಜೋರುಮಳೆಯಿಂದ ಚಾಮನಳ್ಳಿ ಗ್ರಾಮದ ಗದ್ದೆಗಳಲ್ಲಿ ನೀರು ನುಗ್ಗಿ ಭತ್ತದ ನಾಟಿ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

ಮಹಾದೇವಪ್ಪ ಬೀರನಾಳ ತಮ್ಮ 5 ಎಕರೆ ಗದ್ದೆಯಲ್ಲಿ 10 ದಿನಗಳ ಹಿಂದೆ ಭತ್ತ ನಾಟಿ ಮಾಡಿದ್ದರು. ಹೊಲ ಸಮತಟ್ಟು ಮಾಡಲು ₹50 ಸಾವಿರ, ಬೀಜಕ್ಕೆ ₹5 ಸಾವಿರ, ರಸಗೊಬ್ಬರಕ್ಕೆ ₹8 ಸಾವಿರ, ನಾಟಿ ಮಾಡಲು ₹15ಸಾವಿರ ವೆಚ್ಚ ಮಾಡಿದ್ದರು.

ಚಂದ್ರೆರೆಡ್ಡಿ ಮಲ್ಲರೆಡ್ಡಿ ತಮ್ಮ 3 ಎಕರೆ ಗದ್ದೆಯಲ್ಲಿ ಮಾಡಿದ್ದ ಭತ್ತದ ನಾಟಿ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಟ್ರ್ಯಾಕ್ಟರ್ ಬಾಡಿಗೆ ₹30 ಸಾವಿರ, ಬೀಜಕ್ಕೆ ₹3 ಸಾವಿರ, ರಸಗೊಬ್ಬರಕ್ಕೆ ₹5 ಸಾವಿರ, ಕೂಲಿ ಕಾರ್ಮಿಕರಿಗೆ ₹10 ಸಾವಿರ ಖರ್ಚು ಮಾಡಿದ್ದರು.

ADVERTISEMENT

ಶರಣಪ್ಪ ಮಲ್ಲಾರೆಡ್ಡಿ ತಮ್ಮ 3 ಎಕರೆ ಗದ್ದೆಯಲ್ಲಿ ಒಂದು ವಾರದ ಹಿಂದೆ ಭತ್ತ ನಾಟಿ ಮಾಡಿದ್ದರು. ಬುಧುವಾರ ಸುರಿದ ಮಳೆಗೆ ಅದು ಕೊಚ್ಚಿಕೊಂಡು ಹೋಗಿದೆ. ರೈತರು ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

‘ನಮ್ಮ ಹಣೆಬರಹ ಸರಿಯಾಗಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದೆ, ಜೋರಾದ ಮಳೆಯಿಂದ ನನ್ನ ಕಣ್ಣಮುಂದೆಯೇ ಭತ್ತದ ನಾಟಿ, ನೀರಲ್ಲಿ ಕೊಚ್ಚಿಕೊಂಡು ಹೋಯ್ತು’ ಎಂದು ರೈತ ಮಹಾದೇವಪ್ಪ ಬೀರನಾಳ ನೋವು ತೋಡಿಕೊಂಡರು.

ಯರಗೋಳ ಗ್ರಾಮದ ರೈತ ಬಸವರಾಜ ಬಾನರ ‘ಪ್ರಜಾವಾಣಿ' ಜೊತೆ ಮಾತನಾಡಿ, ‘ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಹತ್ತಿ ಬೆಳೆ ಕೊಳೆಯುತ್ತಿದೆ. ಹೆಸರು ಬೆಳೆಗೆ ರೋಗ ತಗಲುತ್ತಿದೆ, ರೈತರ ಹಣೆ ಬರಹ ಸರಿಯಾಗಿಲ್ಲ, ಎಲ್ಲ ದೇವರ ಮಹಿಮೆ’ ಎಂದರು.

ಬುಧವಾರ ನಸುಕಿನಿಂದಲೇ ಸುರಿದ ತಂತುರು ಮಳೆ ಮಧ್ಯಾಹ್ನದ ಹೊತ್ತಿಗೆ ಜೋರಾಯಿತು, ವಡ್ನಳ್ಳಿ, ಯರಗೋಳ, ಮಲಕಪ್ಪನಳ್ಳಿ, ಕಂಚಗಾರಳ್ಳಿ, ಖಾನಳ್ಳಿ, ಅಲ್ಲಿಪುರ ಗ್ರಾಮಗಳ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ರೈತರು ಸಂತಸದಲ್ಲಿದ್ದಾರೆ.

ಗುಲುಗುಂಧಿ ಗ್ರಾಮದ ಮುಖ್ಯರಸ್ತೆ, ಯರಗೋಳ ಗ್ರಾಮದಿಂದ ಯಾಗಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.