
ಮಲ್ಲಿಕಾರ್ಜುನ ಮುತ್ಯಾ
ಯಾದಗಿರಿ: ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ ದೂರಿನ ಅನ್ವಯ ಮುತ್ಯಾ ವಿರುದ್ಧ ಬಿಎನ್‌ಎಸ್ ಸೆಕ್ಷನ್ 75(2) ಜೊತೆಗೆ 12 ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ದಂಪತಿಯ 7 ವರ್ಷದ ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿತ್ತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಠಕ್ಕೆ ತೆರಳಿ, ಬಾಲಕಿಯ ಪೋಷಕರನ್ನು ಭೇಟಿಯಾಗಿ ವಿಚಾರಣೆ ನಡೆಸಿದ್ದರು. ‘3 ವರ್ಷಗಳಿಂದ ಮಠಕ್ಕೆ ಬರುತ್ತಿದ್ದೇವೆ. ಫೆಬ್ರುವರಿ 19ರಂದು ಬಂದಿದ್ದಾಗ ಮುತ್ಯಾರು ಪ್ರೀತಿಯಿಂದ ಮಗಳನ್ನು ತಮ್ಮ ಹತ್ತಿರ ಕೂಡಿಸಿಕೊಂಡಿದ್ದರು. ಅದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡು ಹೆಚ್ಚಿನ ಸಂಖ್ಯೆಯ ಲೈಕ್ ಸಿಗುವುದೆಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದೇವೆ’ ಎಂದು ವಿಚಾರಣೆಯಲ್ಲಿ ಪೋಷಕರು ಹೇಳಿಕೆ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಂದ ವರದಿ ಬಂದ ಬಳಿಕ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಎಸ್‌ಪಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಂಟಿಯಾಗಿ ವಿಡಿಯೊವನ್ನು ವೀಕ್ಷಣೆ ಮಾಡಿದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ಬಾಲಕಿಯ ಚಿಕ್ಕಮ್ಮನ ಜನ್ಮ ದಿನಾಚರಣೆಗಾಗಿ ಮಠಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ಮಗುವಿಗೆ ಮುಟ್ಟಿರುವುದು ಕಂಡು ಬಂದಿರುತ್ತದೆ. ಹೀಗಾಗಿ, ಪೋಕ್ಸೊ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿವೆ.
ನೋಟಿಸ್‌ಗೆ ಸೂಚನೆ: ‘ಪ್ರಕರಣ ದಾಖಲಾದ ಬಳಿಕ ಮಲ್ಲಿಕಾರ್ಜುನ ಮುತ್ಯಾ ಮಠದಲ್ಲಿ ಇಲ್ಲ. ತನಿಖೆಗೆ ಸಹಕಾರ ಕೊಡುವುದಾಗಿ ಹೇಳಿದ್ದು, ನೋಟಿಸ್ ಕೊಡುವಂತೆ ತನಿಖಾ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.