
ಶಹಾಪುರ: 18 ವರ್ಷದೊಳಗಿನ ಬಾಲಗರ್ಭಿಣಿಯರನ್ನು ಪತ್ತೆ ಮಾಡಿ ಎಫ್ಐಆರ್ ದಾಖಲಿಸುವ ಹೊಣೆಯನ್ನು ಜಿಲ್ಲಾಧಿಕಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ವಹಿಸಿದ್ದಾರೆ. ತಾಯಿ ಕಾರ್ಡ್ ಪಡೆಯಲು ಆಸ್ಪತ್ರೆಗೆ ಹೋದಾಗ ಬಾಲ ಗರ್ಭಿಣಿಯರು ಪತ್ತೆಯಾಗುತ್ತಿದ್ದಾರೆ. ಇವರ ಪತಿಯರ ವಿರುದ್ಧವೂ ಎಫ್ಐಆರ್ ದಾಖಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಕಂಡು ಬಂದಿರುವ 134 ಬಾಲ ಗರ್ಭಿಣಿಯರ ಪ್ರಕರಣಗಳ ಪೈಕಿ 6 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಿಸಿರುವುದು ಇತ್ತೀಚೆಗೆ ನಡೆದ ಪೋಕ್ಸೊ ಕಾಯ್ದೆಯ ಪರಿಶೀಲನಾ ಸಭೆಯಲ್ಲಿ ದೃಢಪಟ್ಟಿತ್ತು. ಎಲ್ಲಾ ಅಪ್ರಾಪ್ತ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಬಿ.ಸುಶೀಲಾ ಸೂಚಿಸಿದ್ದಾರೆ. ಆದೇಶ ಪಾಲಿಸದಿದ್ದರೆ ಅಧಿಕಾರಿಗಳ ಮೇಲೆ ಕರ್ತವ್ಯ ನಿರ್ಲಕ್ಷ್ಯತನ ಆಧಾರದ ಮೇಲೆ ಸ್ವಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಆಯಾ ತಾಲ್ಲೂಕು ಸಿಡಿಪಿಒ ಅವರಿಗೆ ಬರೆದ ಪತ್ರದಲ್ಲಿ ನಮೂದಿಸಿದ್ದಾರೆ.
ಬಾಲಗರ್ಭಿಣಿಯರು ಪತ್ತೆಯಾದ ಪ್ರಕರಣಗಳ ಬೆನ್ನು ಹತ್ತಿರುವ ಪೊಲೀಸರು, ಕುಟುಂಬದವರ ಮನೆಗೆ ತೆರಳಿ ಬಾಲಗರ್ಭಿಣಿಯನ್ನು ನ್ಯಾಯಾಲಯಕ್ಕೆ ಕರೆ ತಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುತ್ತಿದ್ದಾರೆ. ಈಗಾಗಲೇ ಹೆರಿಗೆಯಾಗಿ ಒಂದೆರಡು ಮಕ್ಕಳನ್ನು ಪಡೆದ ಬಾಲಕಿಯರೂ ಆತಂಕದಿಂದ ನ್ಯಾಯಾಲಯಕ್ಕೆ ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.