
ಸೈದಾಪುರ: ‘ಕಳ್ಳತನ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನದೊಂದಿಗೆ ಸದಾ ಸಿದ್ಧವಾಗಿರುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಶಂಕರ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಸೋಮವಾರ ಜಿಲ್ಲಾ ಮತ್ತು ಸೈದಾಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಕುರಿಗಾಹಿಗಳ ಸಮಸ್ಯೆಗಳು ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಸಾರ್ವಜನಿಕರಿಗೆ ಕಾನೂನಡಿಯಲ್ಲಿ ನ್ಯಾಯ ಕಲ್ಪಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಹೀಗಾಗಿ ಜನ ಭಯ, ಆತಂಕ ಪಡದೆ ನೇರವಾಗಿ ಹತ್ತಿರದ ಠಾಣೆಗೆ ಬಂದು ದೂರು ದಾಖಲಿಸಬೇಕು. ಅಲ್ಲಿ ನಿಮಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ನೇರವಾಗಿ ಕಚೇರಿ ಸಮಯದಲ್ಲಿ ನನ್ನನ್ನು ಭೇಟಿ ಮಾಡಿ. ಇಲ್ಲಿ ಯಾವ ಮುಖಂಡನ ಮಧ್ಯಸ್ಥಿಕೆಯೂ ಬೇಡ. ಇದರ ಜೊತೆಗೆ ಕುರಿಗಾಹಿಗಳಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಅತ್ಯಗತ್ಯವಾಗಿದೆ. ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು’ ಎಂದರು.
ಇದಕ್ಕೂ ಮೊದಲು ಜಿಲ್ಲಾ ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ ನೀಲಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಕುರಿ ಕಳ್ಳತನ ಪ್ರಕರಣಗಳು ಹಿಂದಿನಿಂದಲೂ ನಿರಂತವಾಗಿ ನಡೆಯುತ್ತಿದ್ದು ಅದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ಬಡ ಕುರಿಗಾಹಿಗಳ ಕುಟುಂಬದ ರಕ್ಷಣೆ ಮಾಡಬೇಕು. ಕುರಿಗಳು ಸತ್ತ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಹಾಗೂ ವರದಿಯೊಂದಿಗೆ ಸರ್ಕಾರದ ಪರಿಹಾರಕ್ಕೆ ಅವಕಾಶ ಮಾಡಿಕೊಡಬೇಕು. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂಬ ಬೇಸರ ಕಾಡುತ್ತಿದೆ’ ಎಂದರು.
ಡಿವೈಎಸ್‌ಪಿ ಸುರೇಶ ನಾಯಕ, ಉಪ ತಹಶೀಲ್ದಾರ್ ದಸ್ತಗಿರಿ ನಾಯಕ, ಪಿಐ ಶಿವಾನಂದ ಎಂ ಮರಡಿ, ಅಧಿಕಾರಿಗಳಾದ ಮಂಜುನಾಥ, ಆಕಾಶ, ಸುರಜಿತ್ ಕುಮಾರ್, ವಿಜಯಲಕ್ಷ್ಮಿ, ಕುರುಬ ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ವಾರದ, ಸಿದ್ದಣ್ಣಗೌಡ ಕಾಡಂನೋರ, ಭೀಮಶಪ್ಪ ಜೇಗರ, ಪ್ರಭುಲಿಂಗ ವಾರದ, ಶೇಷಪ್ಪ ಜೇಗರ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಣ್ಣ ಐಕೂರು, ಸಾಬರೆಡ್ಡಿ, ವೆಂಕೋಬ ತುರುಕಾನದೊಡ್ಡಿ, ವಲಯಾಧ್ಯಕ್ಷ ರವೀಂದ್ರ ಕಡೇಚೂರು, ಸಿದ್ದು ಪೂಜಾರಿ, ವಿಜಯ ಕಂದಳ್ಳಿ, ಪುಂಡಲಿಕ, ರಾಚೋಟಿ ಕಣೇಕಲ್, ಮಹೇಶ ಜೇಗರ್ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.