ADVERTISEMENT

ಕಳಪೆ ಕಾಮಗಾರಿ: ಕ್ರಮಕ್ಕೆ ಆಗ್ರಹ

ರಸ್ತೆ ಗುಂಡಿ ಮುಚ್ಚುವ, ಗಿಡಗಂಟಿ ತೆರವು ಕಾರ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:44 IST
Last Updated 1 ನವೆಂಬರ್ 2022, 5:44 IST
ವಡಗೇರಾ ರಸ್ತೆಯ ಗುಂಡಿಗಳಿಗೆ ಹಾಕಿರುವ ಹಾಕಿದ ಡಾಂಬರ್ ಕಿತ್ತು ಬರುತ್ತಿರುವುದು
ವಡಗೇರಾ ರಸ್ತೆಯ ಗುಂಡಿಗಳಿಗೆ ಹಾಕಿರುವ ಹಾಕಿದ ಡಾಂಬರ್ ಕಿತ್ತು ಬರುತ್ತಿರುವುದು   

ಯಾದಗಿರಿ: ಸರ್ಕಾರ ಪ್ರತಿ ವರ್ಷ ರಸ್ತೆ ಗುಂಡಿ ಮುಚ್ಚಲು ಹಾಗೂ ರಸ್ತೆ ಬದಿಯಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲು ಲಕ್ಷಾಂತರ ರೂಪಾಯಿ ಟೆಂಡರ್‌ಗಳನ್ನು ಕರೆದು ಗುತ್ತಿಗೆದಾರರಿಗೆ ನೀಡುತ್ತದೆ. ಆದರೆ, ಗುತ್ತಿಗೆದಾರರು ಕಾಟಾಚಾರಕ್ಕೆ ಎಂಬಂತೆ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ನಗರ ಹೊರವಲಯದ ವಡಗೇರಾ ಕ್ರಾಸ್‌ನಿಂದ (ಭೀಮಾ ನದಿಯ ಹಳೆಯ ಸೇತುವೆಯ ಅನತಿ ದೂರ)ವಡಗೇರಾ ಪಟ್ಟಣದವರೆಗೆ ರಸ್ತೆಯ ಮೇಲೆ ಬಿದ್ದ ಗುಂಡಿಗಳನ್ನು ಮುಚ್ಚಲು ಹಾಗೂ ಗಿಡಗಂಟಿಗಳ ತೆರವಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹ 12 ಲಕ್ಷ ರೂಪಾಯಿಗಳ ಟೆಂಡರ್‌ ಕರೆಯಲಾಗಿತ್ತು.

ಟೆಂಡರ್ ಪಡೆದ ಗುತ್ತಿಗೆದಾರರು ಸಂಪೂರ್ಣ ಕಾಮಗಾರಿಯನ್ನು ಮಾಡದೆ ಕಾಟಾಚಾರಕ್ಕೆ ಕಾಮಗಾರಿಯನ್ನು ಮಾಡಿ ಬಿಲ್ ಎತ್ತುವ ಹುನ್ನಾರ ನಡೆಸಿದ್ದಾರೆ ಎಂದು ಈ ರಸ್ತೆಯ ಮೇಲೆ ದಿನಾಲೂ ಸಂಚರಿಸುವ ವಾಹನ ಚಾಲಕರು ದೂರಿದ್ದಾರೆ.

ADVERTISEMENT

ವಡಗೇರಾ ಕ್ರಾಸ್‌ದಿಂದ ಸುಮಾರು 18 ಕಿ.ಮೀ. ಅಂತರದಲ್ಲಿರುವ ವಡಗೇರಾ ಪಟ್ಟಣಕ್ಕೆ ಜಿಲ್ಲಾ ಅತಿ ಮುಖ್ಯ ರಸ್ತೆ ಇದೆ. ಈ ರಸ್ತೆಯ ಮೇಲೆ ಕಂದಕಗಳು ಬಿದ್ದಿವೆ. ಹಾಗೆಯೆ ರಸ್ತೆಯ ಬದಿಯ ಟಾರ್ ಕಿತ್ತು ಹೋಗಿದೆ. ಗುತ್ತಿಗೆ ಪಡೆದ ಗುತ್ತಿಗೆದರರು ಈ ರಸ್ತೆಯನ್ನು ದುರಸ್ತಿ ಮಾಡಿ ರಸ್ತೆಯ ಬದಿಯಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು. ಆದರೆ, ಗುತ್ತಿಗೆದಾರರು ಸಂಪೂರ್ಣ ಕಾಮಗಾರಿಯನ್ನು ಮಾಡಿಲ್ಲ. ಈ ರಸ್ತೆಯ ಮೇಲೆ ಸುಮಾರು 57 ಕಡೆ ರಸ್ತೆಯ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ಡಾಂಬರ್‌ ಹಾಕದೆ ಹಾಗೆ ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನೂ ಸುಮಾರು 10 ಕಡೆ ರಸ್ತೆಯ ಮಧ್ಯ ಭಾಗದಲ್ಲಿ ಗುಂಡಿಗಳು ಉಳಿದುಕೊಂಡಿವೆ. ಕೆಲವೊಂದು ಕಡೆ ರಸ್ತೆಗೆ ಜಲ್ಲಿ ಕಲ್ಲು ಹಾಕಿ, ಡಾಂಬರ್‌ ಹಾಕಲಾಗಿದೆ. ಆದರೆ, ರಸ್ತೆಗೆ ಹಾಕಿದ ಡಾಂಬರ್‌ ಕೈಯಿಂದ ತೆಗೆದರೆ ಕಿತ್ತು ಹೋಗುತ್ತಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಧಿಕಾರಿ, ಇತ್ತ ಕಡೆ ಗಮನಹರಿಸಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ, ಗುತ್ತಿಗೆದಾರರಿಗೆ ಸಹಾಯ ಮಾಡುತ್ತಿರುವ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.