
ವಡಗೇರಾ: ‘ತಾಲ್ಲೂಕಿನ ಗಡ್ಡೆಸೂಗುರು ಹಾಗೂ ಹುಲ್ಕಲ್ (ಜೆ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಮೇಲೆ ದೊಡ್ಡ ಗುಂಡಿ ಬಿದ್ದಿರುವ ಕಾರಣ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ವಾಹನ ಸವಾರರು ದೂರಿದ್ದಾರೆ.
ಈ ಮಾರ್ಗದಲ್ಲಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಅಲ್ಲದೆ ತುಮಕೂರು ಗ್ರಾಮದ ಹತ್ತಿರವಿರುವ ಕೋರಗ್ರೀನ್ ಸಕ್ಕರೆ ಕಾರ್ಖಾನೆಗೆ ಸಾಕಷ್ಟು ಲಾರಿಗಳು ಸಂಚರಿಸುತ್ತವೆ. ಆದರೆ ರಸ್ತೆ ಮೇಲಿನ ಗುಂಡಿಗಳಿಂದ ಸವಾರರು ಪರಿತಪಿಸುವಂತಾಗಿದೆ.
ರಸ್ತೆ ಮೇಲಿನ ಗುಂಡಿಯನ್ನು ತಪ್ಪಿಸಲು ಹೋಗಿ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ವಾಹನ ಚಾಲಕರು.
‘ಇನ್ನೂ ದ್ವಿಚಕ್ರ ವಾಹನ ಸವಾರರು ಗುಂಡಿಯನ್ನು ತಪ್ಪಿಸಲು ಹೋಗಿ ಬಿದ್ದು ಕೈಕಾಲುಗಳನ್ನು ಮುರಿದು ಕೊಂಡಿದ್ದಾರೆ. ಗುಂಡಿ ಮುಚ್ಚಲು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗಡ್ಡೆಸೂಗುರು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಮೇಲೆ ಬಿದ್ದಿರುವ ಗುಂಡಿಯನ್ನು ಮುಚ್ಚಲು ಕ್ರಮಗಳನ್ನು ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.