ADVERTISEMENT

ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮ

ಹೋನಗೇರಾ, ಕೋಟಗೇರಾಕ್ಕೆ ತೆರಳಿ ಮಾಹಿತಿ ಪಡೆದ ಅಧಿಕಾರಿಗಳಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 10:56 IST
Last Updated 10 ಮಾರ್ಚ್ 2020, 10:56 IST
ಯಾದಗಿರಿ ತಾಲ್ಲೂಕಿನ ಹೊನಗೇರಾ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೋಮವಾರ ಸಂಜೆ ಭೇಟಿ ನೀಡಿದರು
ಯಾದಗಿರಿ ತಾಲ್ಲೂಕಿನ ಹೊನಗೇರಾ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೋಮವಾರ ಸಂಜೆ ಭೇಟಿ ನೀಡಿದರು   

ಯಾದಗಿರಿ: ಸೋಮವಾರದ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಮುಖ ಪುಟದಲ್ಲಿ ಪ್ರಕಟವಾದ ‘ಇನ್ನೂ ಇದೆ ಅಸ್ಪೃಶ್ಯತೆ’ ವರದಿಗೆ ಸ್ಪಂದಿಸಿರುವ ಜಿಲ್ಲಾ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಸೋಮವಾರ ಸಂಜೆ ಹೊನಗೇರಾ, ಕೋಟಗೇರಾ ಗ್ರಾಮಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ ಆಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಆಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಮೊದಲು ಹೊನಗೇರಾಕ್ಕೆ ತೆರಳಿದ ಅಧಿಕಾರಿಗಳ ತಂಡ ಗ್ರಾಮದಲ್ಲಿ ಪತ್ರಿಕೆಯಲ್ಲಿ ಬಂದಿರುವ ವರದಿ ಬಗ್ಗೆ ತಿಳಿಸಿ ವಿಚಾರಿಸಿದ್ದಾರೆ. ಆದರೆ, ಗ್ರಾಮಸ್ಥರು ಇಂಥ ಆಚರಣೆ ಇಲ್ಲ. ಚಿಕ್ಕ ಮಕ್ಕಳಿಗೆ ಮಾತ್ರ ಕ್ಷೌರ ಮಾಡಿಲ್ಲ ಎಂದು ಅಧಿಕಾರಿಗಳಿಗೆ ಸಮಜಾಯಿಸಿ ನೀಡಿದ್ದಾರೆ. ಆದರೆ, ವಾಸ್ತವತೆ ಅರಿತ ಅಧಿಕಾರಿಗಳು ಇಂಥ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ನಂತರ ಕೋಟಗೇರಾದಲ್ಲಿ ಗ್ರಾಮದ ಹಿರಿಯರ ಜೊತೆ ಮಾತನಾಡಿದ್ದಾರೆ. ಹೋಟೆಲ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆ, ಕ್ಷೌರ ಮಾಡದಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ದ್ದಾರೆ. ಅಲ್ಲದೆ ಈ ಹಿಂದೆ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳ ಬಳಿ ಗ್ರಾಮದ ಹಿರಿಯರು ತಿಳಿಸಿದ್ದಾರೆ.

ADVERTISEMENT

‘ಈ ವಾರದಲ್ಲಿ ಎರಡು ಗ್ರಾಮಗಳಲ್ಲಿ ಸಭೆ ನಡೆಸಲಾಗುವುದು. ಈ ಬಗ್ಗೆ ಪಿಡಿಒ ಅವರಿಗೆ ನೋಟಿಸ್‌ ಜಾರಿ ಮಾಡಿ ಸಭೆ ಸೇರಿಸಲು ತಿಳಿಸಲಾಗುವುದು. ಈ ಹಿಂದೆಹೊನಗೇರಾ ಗ್ರಾಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳ ಶಾಂತಿ ಸಭೆ ನಡೆಸಲಾಗಿದೆ. ಹೀಗಾಗಿ ಮುಂದೆ ತಹಶೀಲ್ದಾರ್‌ ಅವರನ್ನು ಕರೆಸಿ ಸಭೆ ನಡೆಸಲಾಗುವುದು’ ಎಂದು ‘ಪ್ರಜಾವಾಣಿ’ಗೆಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಎಸ್‌.ಎಸ್‌. ಚನ್ನಬಸವ ತಿಳಿಸಿದರು.

‘ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮದ ಬಗ್ಗೆ2–3 ದಿನಗಳಲ್ಲಿ ಫ್ಲೆಕ್ಸ್‌ ಮಾಡಿ ಹಾಕಿಸಲಾಗುವುದು.ಈ ಬಗ್ಗೆ ಗ್ರಾಮಸ್ಥರಿಗೆತಿಳಿ ಹೇಳಲಾ ಗುವುದು.ಅಸ್ಪೃಶ್ಯತೆ ಆಚರಣೆ ಕಾನೂನು ಪ್ರಕಾರ ಅಪರಾಧ. ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ತಿಳಿವಳಿಕೆ ನೀಡಲಾಗುವುದು’ ಎಂದು ತಿಳಿಸಿದರು.

ಈ ವೇಳೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರಭು ದೊರೆ,ಮೊರಾರ್ಜಿ ಶಾಲೆಯ ಶಿಕ್ಷಕ ಅಶೋಕ, ಹತ್ತಿಕುಣಿ ಹಾಸ್ಟೆಲ್‌ ವಾರ್ಡನ್‌ ಮಹಮ್ಮದ್‌ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.