ಸುರಪುರ: ‘ಮಳೆಗಾಲ ಎದುರಿಸಲು ಎಲ್ಲ ಇಲಾಖೆಗಳು ಸನ್ನದ್ಧವಾಗಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು’ ಎಂದು ತಹಶೀಲ್ದಾರ್ ಎಚ್.ಎ.ಸರಕಾವಸ್ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಾರಾಯಣಪುರ ಜಲಾಶಯದಿಂದ ಉಂಟಾಗಬಹುದಾದ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಈ ಪೈಕಿ ಪ್ರವಾಹ ಪೀಡಿತವಾಗುವ 15 ಗ್ರಾಮಗಳನ್ನು ಗುರುತಿಸಲಾಗಿದ್ದು ಅವುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ 08443-256043 ಸಹಾಯವಾಣಿ ಸ್ಥಾಪಿಸಲಾಗಿದೆ. ವಿಪತ್ತು ನಿರ್ವಹಣೆಗೆ ಎರಡು ಆ್ಯಪ್‍ಗಳು ಪ್ರತಿ ಮೂರು ಗಂಟೆಗೊಮ್ಮೆ ಮಾಹಿತಿ ನೀಡುತ್ತವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯಾನಿವಾರ್ಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ‘ಪಿಡಿಒಗಳು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ನೀರಿನ ಟ್ಯಾಂಕ್, ತೆರೆದ ಬಾವಿ, ನೀರಿನ ಸಂಗ್ರಹ ಮೂಲಗಳನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಿಸಬೇಕು. ಇದು ಬಹು ಮುಖ್ಯವಾದ ಪ್ರಥಮ ಆದ್ಯತೆಯಾಗಿರುತ್ತದೆ. ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದರು.
‘ಚರಂಡಿ ಸ್ವಚ್ಛಗೊಳಿಸಬೇಕು. ನೀರಿನ ಪೈಪ್‍ಲೈನ್ ಸೋರಿಕೆಗಳಿದ್ದರೆ ದುರಸ್ತಿ ಗೊಳಿಸಬೇಕು. ಚರಂಡಿ ನೀರು ಪೈಪ್‍ಲೈನ್‍ಗಳಲ್ಲಿ ಹೋಗದಂತೆ ಎಚ್ಚರಿಕೆ ವಹಿಸಿ ಸರಿಪಡಿಸಬೇಕು. ಚರಂಡಿ ನೀರು ಪೈಪ್‍ಲೈನ್‍ಗಳಲ್ಲಿ ಹೋಗುವುದಿಲ್ಲ, ನೀರಿನ ಮೂಲಗಳನ್ನು ನಾವು ಖುದ್ಧಾಗಿ ಪರಿಶೀಲನೆ ಮಾಡಿದ್ದೇವೆ ಎಂದು ಮತ್ತು ನೀರಿನ ಸಂಗ್ರಹಗಳ ಮಾಹಿತಿಯ ದೃಢಿಕರಣ ಪತ್ರವನ್ನು ಪಿಡಿಒಗಳು ಮತ್ತು ಆರ್‌ಡಬ್ಲುಎಸ್ ಎಇ ಅವರು ಜಂಟಿಯಾಗಿ ತಾ.ಪಂ ಸಲ್ಲಿಸಬೇಕು’ ಎಂದರು.
‘ಮಳೆಗಾಲದಲ್ಲಿ ನದಿಗೆ ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರಿಗೆ ನದಿ ತೀರಕ್ಕೆ ಹೋಗದಂತೆ ತಿಳಿಸಬೇಕು. ಬಟ್ಟೆ, ಪಾತ್ರೆ ತೊಳೆಯಬಾರದು, ದನ, ಕುರಿಗಳಿಗೆ ನೀರು ಕುಡಿಸಲು ನದಿ ತೀರಕ್ಕೆ ಹೋಗದಂತೆ ಗ್ರಾಮಗಳಲ್ಲಿ ಡಂಗೂರ ಹಾಕಿಸಬೇಕು. ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಮೇಲಧಿಕಾರಿಗಳು ಮಾಹಿತಿ ಕೇಳಿದರೆ ತಕ್ಷಣ ಕೊಡಬೇಕು’ ಎಂದು ಸೂಚಿಸಿದರು.
‘ಆರೋಗ್ಯ ಇಲಾಖೆಯವರು ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತಿ ಮೂಡಿಸಬೇಕು. ಮಳೆಗಾಲದಲ್ಲಿ ಮನೆಗಳು ಹಾನಿಯಾದರೆ ಅಥವಾ ಬಿದ್ದರೆ ಗ್ರಾಮ ಲೆಕ್ಕಾಧಿಕಾರಿಗಳು ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಚ್.ಡಿ. ಪಾಟೀಲ, ನೀರಿನ ಗುಣಮಟ್ಟ ಪರಿಶೀಲಿಸುವ(ಎಫ್‍ಟಿಕೆ) ಕಿಟ್ ನಿರ್ವಹಣೆ, ಪ್ರಯೋಜನ, ಫಲಿತಾಂಶದ ಬಗ್ಗೆ ವಿವರಿಸಿದರು.
ಬಳಿಕ ಕೆಲ ಗ್ರಾ.ಪಂ ಪಿಡಿಒಗಳಿಗೆ ಎಫ್‍ಟಿಕೆ ಕಿಟ್‍ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಜಿ.ಪಂ ಎಇಇ ಮುಕ್ತಾರ್, ಗ್ರಾಪಂಗಳ ಪಿಡಿಒಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.