ADVERTISEMENT

ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ ಬಿ.ವಿ.ನಾಯಕ: ರಾಜಾ ಅಮರೇಶ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 10:18 IST
Last Updated 24 ಏಪ್ರಿಲ್ 2019, 10:18 IST
ರಾಜಾ ಅಮರೇಶ ನಾಯಕ
ರಾಜಾ ಅಮರೇಶ ನಾಯಕ   

ಯಾದಗಿರಿ: ‘ಬಿ.ವಿ.ನಾಯಕ ಆವರು ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸುವ ಮೂಲಕ ಜನರನ್ನು ವಂಚಿಸಿದ್ದಾರೆ’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಆರೋಪಿಸಿದರು

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರಯ, ‘ಮಹತ್ವಕಾಂಕ್ಷಿ ಜಿಲ್ಲೆಗಳಲ್ಲಿ ರಾಜ್ಯದ ಎರಡು ಜಿಲ್ಲೆಗಳ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಕೇಂದ್ರದಿಂದ ಒಂದೂ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಎಂದೂ ಕ್ಷೇತ್ರದಲ್ಲಿನ ಹಳ್ಳಿಗಳಲ್ಲಿನ ಜನರ ಸ್ಥಿತಿಗತಿಯತ್ತ ಕಣ್ಣೆತ್ತಿಯೂ ನೋಡಿಲ್ಲ. ಜನಸಂಪರ್ಕವನ್ನೇ ಕಡಿದುಕೊಂಡು ಜನರು ನೀಡಿದ್ದ ಅಧಿಕಾರ ಅನುಭವಿಸಿದ್ದಾರೆ’ ಎಂದು ದೂರಿದರು.

‘ಈಗಿನ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. ದೇಶದಲ್ಲಿ ಇನ್ನೂ ಮಾಡಬೇಕಾದ ಕೆಲಸಗಳು ಬಾಕಿ ಇವೆ. ಎಲ್ಲಾ ಕಡೆ ಮೋದಿ ಅಲೆ ಇದೆ. ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ, ಕೇಂದ್ರ ಸರ್ಕಾರದಿಂದ ಜನಪರ ಯೋಜನೆಗಳ ಲಾಭ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾತನಾಡಿ,‘ಕಳೆದ 20 ವರ್ಷಗಳ ಕಾಲ ವೆಂಕಟೇಶ ನಾಯಕ ಸಂಸದರಾಗಿದ್ದರು. ಕಳೆದ ಐದು ವರ್ಷ ಅವರ ಪುತ್ರ ಸಂಸದರಾಗಿ ಆಯ್ಕೆಯಾಗಿ ಜನರ ಮನಸ್ಸಿನಲ್ಲಿ ಉಳಿಯುವಂತಹ ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲಿಲ್ಲ. ಈ ಭಾಗ ಹಿಂದುಳಿಯಲು ಅವರ ಕೊಡುಗೆ ಕೂಡ ಅಪಾರವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕ ನರಸಿಂಹ ನಾಯಕ ರಾಜೂಗೌಡ ಮಾತನಾಡಿ,‘ಜನರ ಮಧ್ಯೆ ಬೆಳೆದಿರುವ, ಅಪಾರ ರಾಜಕೀಯ ಅನುಭವ ಹೊಂದಿರುವ ರಾಜಾ ಅಮರೇಶ ನಾಯಕ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಪಕ್ಷದ ಕಾರ್ಯಕರ್ತರು ಒಗ್ಗಟಾಗಿ ಕೆಲಸ ಮಾಡುವ ಮೂಲಕ ಒಳ್ಳೆಯ ವ್ಯಕ್ತಿಯನ್ನು ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಿಜೆಪಿ ಮುಖಂಡರಾದ ಡಾ.ಎ.ಬಿ. ಮಾಲಕರೆಡ್ಡಿ, ಎನ್ .ಶಂಕ್ರಪ್ಪ, ಡಾ.ವೀರಬಸವಂತರೆಡ್ಡಿ ಮುದ್ನಾಳ, ಶರಣಪ್ಪಗೌಡ ಜಾಡಲದಿನ್ನಿ, ದೇವರಾಜ ನಾಯಕ್, ಎಸ್.ಪಿ. ನಾಡೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.