ADVERTISEMENT

ಸುರಪುರ | ‘ಖಾಸಗಿ ಬ್ಯಾಂಕ್‍ಗಳ ಹಾವಳಿ ತಡೆಗಟ್ಟಿ’: ಕೆ.ನೀಲಾ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:26 IST
Last Updated 31 ಆಗಸ್ಟ್ 2025, 6:26 IST
ಸುರಪುರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಮ್ಮೇಳನದಲ್ಲಿ ಕೆ.ನೀಲಾ ಮಾತನಾಡಿದರು 
ಸುರಪುರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಮ್ಮೇಳನದಲ್ಲಿ ಕೆ.ನೀಲಾ ಮಾತನಾಡಿದರು    

ಸುರಪುರ: ‘ಖಾಸಗಿ ಬ್ಯಾಂಕ್‍ಗಳ ಹಾವಳಿ ಮಿತಿ ಮೀರಿದೆ. ಒಂದಕ್ಕೆ ಎರಡು ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದು, ಇದರಿಂದ ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ’ ಎಂದು ಜನವಾದಿ ಸಂಘಟನೆ ರಾಜ್ಯಸಮಿತಿ ಉಪಾಧ್ಯಕ್ಷೆ ಕೆ.ನೀಲಾ ಕಳವಳ ವ್ಯಕ್ತಪಡಿಸಿದರು.

ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಶನಿವಾರ ಏರ್ಪಡಿಸಿದ್ದ 6ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಕೂಲಿಕಾರರು ವಲಸೆ ಹೋಗುತ್ತಾರೆ. ಇದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ವೃದ್ಧರಿಗೆ ಭದ್ರತೆ ಇರುವುದಿಲ್ಲ’ ಎಂದರು.

ADVERTISEMENT

‘ವಲಸೆ ತಡೆಗಟ್ಟಲು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ವರ್ಷಕ್ಕೆ ಕನಿಷ್ಠ 200 ದಿನ ಕೆಲಸ ನೀಡಬೇಕು. ಪ್ರತಿ ದಿನಕ್ಕೆ ₹600 ಕೂಲಿ ಕೊಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಮಹಿಳೆಯರಿಗೆ ಅಸುರಕ್ಷತೆ ಕಾಡುತ್ತಿದೆ. ಶಹಾಪುರದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಗು ಹೆತ್ತಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಸರ್ಕಾರ ಇದಕ್ಕೆ ಕಾರಣರಾದವರನ್ನು ಮರಣದಂಡನೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ದಾವಲಸಾಬ ನದಾಫ, ಮಲ್ಲಮ್ಮ ಕೊಡ್ಲಿ, ಅಯ್ಯಪ್ಪ ಅನ್ಸೂರ ಮಾತನಾಡಿದರು. ತಾಲ್ಲೂಕು ಸಮಿತಿ ಅಧ್ಯಕ್ಷ ಶರಣಬಸವ ಜಂಬಲದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಆಲ್ಹಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಶರಣಬಸವ ಜಂಬಲದಿನ್ನಿ (ಅಧ್ಯಕ್ಷ), ಬಸವರಾಜ ತನಿಖೆದಾರ, ನಿಂಗಮ್ಮ ಗೋಡ್ರಿಹಾಳ (ಉಪಾಧ್ಯಕ್ಷರು), ಪ್ರಕಾಶ ಆಲ್ಹಾಳ (ಪ್ರಧಾನ ಕಾರ್ಯದರ್ಶಿ), ಈಶಮ್ಮ ದೊಡ್ಡಮನಿ, ಭೀಮರಾಯ ರತ್ತಾಳ (ಸಹ ಕಾರ್ಯದರ್ಶಿ), ಸಿದ್ದಮ್ಮ ಬೋನಾಳ, ಭೀಮರಾಯ ಶೆಳ್ಳಗಿ, ಬಸವರಾಜ, ಮಾಳಮ್ಮ ಕೊಂಡಾಪುರ, ದಂಡಮ್ಮ ಪೂಜಾರಿ, ಮೈರುಂಬಿ ಹುಸೇನಸಾಬ, ಮಹಿಬೂಬ ಖುರೇಶಿ (ಕಾರ್ಯಕಾರಿ ಸಮಿತಿ ಸದಸ್ಯರು) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.