ADVERTISEMENT

ಯಾದಗಿರಿ ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌

ಮಕ್ಕಳಲ್ಲಿ ಉರಿಜ್ವರ, ಪಾಲಕರ ಆತಂಕ; ಆಸ್ಪತ್ರೆಯ ಕೆಲಸಗಾರರಿಗೆ ಕೊರೊನಾ ಭೀತಿ?

ಬಿ.ಜಿ.ಪ್ರವೀಣಕುಮಾರ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST
ಯಾದಗಿರಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಿರುವುದು
ಯಾದಗಿರಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಿರುವುದು   

ಯಾದಗಿರಿ: ಕೊರೊನಾ ಭೀತಿಯಿಂದಾಗಿ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿವೆ. ತುರ್ತು ಚಿಕಿತ್ಸೆ ನೀಡುತ್ತೇವೆ ಎಂದು ಹೇಳುವ ಖಾಸಗಿ ವೈದ್ಯರು ವಾಸ್ತವವಾಗಿ ಗೇಟಿಗೆಬೀಗ ಹಾಕಿದ್ದಾರೆ. ಇದರಿಂದ ರೋಗಿಗಳು
ಪರದಾಡುತ್ತಿದ್ದಾರೆ.

ಈಗ ನಗರದಲ್ಲಿ 39 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಸಂಜೆ 6 ಗಂಟೆಯಾದರೂ ಬಿಸಿಲಿನ ಪ್ರಖರತೆ ಕಡಿಮೆ ಆಗುವುದಿಲ್ಲ. ಇಂಥವೇಳೆ ಚಿಕ್ಕಮಕ್ಕಳಲ್ಲಿ ಬೇಸಿಗೆ ಬಿಸಿಲಿನಿಂದ ಉರಿ ಜ್ವರ ಕಾಣಿಕೊಳ್ಳುತ್ತಿದೆ. ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋದರೆ ಬಾಗಿಲು ಹಾಕಿರುವುದರಿಂದ ಪೋಷಕರು ಪರದಾಡುತ್ತಿದ್ದಾರೆ.

ನಗರದಲ್ಲಿ 20ಕ್ಕೂ ಹೆಚ್ಚು ಕ್ಲಿನಿಕ್‌, ಖಾಸಗಿ ಆಸ್ಪತ್ರೆಗಳಿವೆ. ಆದರೆ, ಅಲ್ಲಲ್ಲಿ ಒಂದೆರಡು ಆಸ್ಪತ್ರೆಗಳು ಮಾತ್ರ ತೆಗೆದಿದ್ದು, ಮಿಕ್ಕ ಎಲ್ಲ ಆಸ್ಪತ್ರೆಗಳು ಬಾಗಿಲು ಹಾಕಿಕೊಂಡಿವೆ. ಕೆಲ ಆಸ್ಪತ್ರೆಗಳು ಒಪಿಡಿ ಮಾತ್ರ ಬಂದ್ ಮಾಡಿದರೆ ಇನ್ನೂ ಕೆಲ ಆಸ್ಪತ್ರೆಗಳು ಸಂಪೂರ್ಣ ಬಂದ್‌ ಮಾಡಿದ್ದಾರೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ADVERTISEMENT

ವೈದ್ಯರಿಗೂ ಕೊರೊನಾ ಭೀತಿ?: ಹೆರಿಗೆ ಆಸ್ಪತ್ರೆಗೆ ಬರುವವರು ಕುಟುಂಬದ ನಾಲ್ಕೈದು ಜನ ಒಟ್ಟಿಗೆ ಬರುತ್ತಾರೆ. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗುವುದಿಲ್ಲ. ಬಂದವರು ಮಾಸ್ಕ್‌ ಧರಿಸಿದರೂ ಮುಂಜಾಗ್ರತೆ ವಹಿಸುವುದಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳನ್ನು ಬಂದು ಮಾಡಲಾಗಿದೆ ಎನ್ನಲಾಗುತ್ತಿದೆ. ಸೋಂಕಿತರು ಆಸ್ಪತ್ರೆಗೆ ಬಂದರೆ ಏನು ಗತಿ ಎಂದು ಬಾಗಿಲು ಹಾಕಿಕೊಂಡಿದ್ದಾರೆ
ಎನ್ನಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಮಾತ್ರ:ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯವವರೇ ಹೆಚ್ಚು. ಅಲ್ಲಿಗೆ ತೆರಳಿದರೆ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಇದ್ದರೆ ಮಾತ್ರ ಪ್ರವೇಶ ಎಂದು ಹೇಳುತ್ತಿದ್ದಾರೆ. ಇದರಿಂದ ಅತ್ತ ಹೋಗಲು ಆಗದೆ ಇತ್ತ ತೆರಳಲು ಆಗದೆ ಪೋಷಕರು ನಡುವೆ ಹೈರಾಣು ಆಗುವಂತ ಸ್ಥಿತಿ ಏರ್ಪಟ್ಟಿದೆ. ತುರ್ತು ಚಿಕಿತ್ಸೆ ಇದ್ದವರಿಗೆ ಮಾತ್ರ ಆಸ್ಪತ್ರೆ ಒಳಗೆ ಬಿಡಲಾಗುತ್ತಿದೆ.
‘ರಾತ್ರಿ ವೇಳೆಯಲ್ಲಿ ಚಿಕ್ಕ ಮಗನಿಗೆ ವಿಪರೀತ ಉರಿಜ್ವರ ಬಂದಿತು. ತಕ್ಷಣ ಖಾಸಗಿ ಆಸ್ಪತ್ರೆಗೆ ತೆರಳಿದರೆ ಎಲ್ಲವೂ ಬಂದ್‌ ಮಾಡಿದ್ದಾರೆ.ಆ ಸಮಯದಲ್ಲಿಮಗುವನ್ನು ಕರೆದುಕೊಂಡು ಹೋಗುವುದು ಎಲ್ಲಿಗೆ?ಜ್ವರ ಹೆಚ್ಚು ಆದರೆಗತಿ ಏನಾಗುತ್ತಿತ್ತು’ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

‘ಅಧಿಕ ರಕ್ತದೋತ್ತಡ, ಮಧುಮೇಹ, ಹೃದಯಾಘಾತ ಇದ್ದವರು ಹೆಚ್ಚಾಗಿ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ಆದರೆ, ಖಾಸಗಿಯವರು ಆಸ್ಪತ್ರೆಗಳನ್ನೇ ಬಂದ್‌ ಮಾಡಿದ್ದಾರೆ. ಬೇರೆ ಕಡೆ ತೆರಳಲು ವಾಹನದ ಸೌಕರ್ಯವಿಲ್ಲ. ಇವರು ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಹೆಸರೇಳದ
ಪೋಷಕರು ದೂರಿದರು.

ಲಾಕ್‌ಡೌನ್‌:ವೈದ್ಯಕೀಯ ಸೇವೆ, ಪೊಲೀಸ್‌ ಇಲಾಖೆ ಲಾಕ್‌ಡೌನ್‌ ವೇಳೆ ಅಗತ್ಯವಾಗಿ ಕಾರ್ಯಾಚರಣೆ ಮಾಡಬೇಕು. ಆದರೆ,
ನಗರದಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳು ಬೀಗಮುದ್ರೆ ಹಾಕಿಕೊಂಡಿರುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರ
ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.