ADVERTISEMENT

ಬಸ್‌ ಪಾಸ್‌ ಅವಧಿ ವಿಸ್ತರಿಸಲು ಆಗ್ರಹ

ಎಐಡಿಎಸ್ಒಯಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:22 IST
Last Updated 3 ಜುಲೈ 2022, 2:22 IST
ವಿದ್ಯಾರ್ಥಿ ಬಸ್‌ ಪಾಸ್‌ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಲು ಮತ್ತು ಬಸ್ ಪಾಸ್‌ಗೆ ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸಲು ಒತ್ತಾಯಿಸಿ ಎಐಡಿಎಸ್ಒ ವತಿಯಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು
ವಿದ್ಯಾರ್ಥಿ ಬಸ್‌ ಪಾಸ್‌ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಲು ಮತ್ತು ಬಸ್ ಪಾಸ್‌ಗೆ ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸಲು ಒತ್ತಾಯಿಸಿ ಎಐಡಿಎಸ್ಒ ವತಿಯಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು   

ಪ್ರಜಾವಾಣಿ ವಾರ್ತೆ

ಯಾದಗಿರಿ: ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ, ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸ್‌ನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಲು ಮತ್ತು ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಒ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಗರದ ಕನಕ ವೃತ್ತದಿಂದ ಹಳೆ ಬಸ್‌ ನಿಲ್ದಾಣದ ವಿಭಾಗೀಯ ಕಚೇರಿವರೆಗೆ ಶನಿವಾರ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಮುಖಂಡರು, ದ್ವೀತಿಯ ಮತ್ತು ತೃತೀಯ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟೆಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ, ಅವರ ತರಗತಿಗಳು ನವೆಂಬರ್‌ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್‌ಪಾಸಿಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ನವೆಂಬರ್‌ನಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್‌ವರೆಗೂ, ಡಿಸೆಂಬರ್‌ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್‌ವರೆಗೂ ಉಚಿತವಾಗಿ ಓಡಾಡಬಹುದು ಎಂದರು.

ಜೂನ್ 30ಕ್ಕೆ ಪಾಸ್ ಅವಧಿ ಮುಗಿದಿರುವುದರಿಂದ, ಮುಂದಿನ ಎರಡು ತಿಂಗಳಿಗೆ ವಿದ್ಯಾರ್ಥಿಗಳು ಶುಲ್ಕ ಭರಿಸಿ ಪಾಸ್ ಪಡೆಯಬಹುದು ಮತ್ತು ಅಲ್ಲಿಯವರೆಗೆ ಜುಲೈ 10 ರ ವರೆಗೆ ವಿದ್ಯಾರ್ಥಿಗಳು ಉಚಿತವಾಗಿ ಓಡಾಡಬಹುದು ಎಂದು ಸಾರಿಗೆ ಇಲಾಖೆಯ ಲಿಖಿತ ಆದೇಶ ಇದ್ದರೂ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳಿಂದ ಟಿಕೆಟ್‌ಗಾಗಿ ಹಣ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಮನವಿ ಪತ್ರ ಸ್ವೀಕರಿಸಿ ಯಾದಗಿರಿ ಘಟಕ ವ್ಯವಸ್ಥಾಪಕ ಪ್ರವೀಣ ‘ಜುಲೈ 10 ರ ವರೆಗೆ ಯಾವ ವಿದ್ಯಾರ್ಥಿ ಟಿಕೆಟ್‌ಗೆ ಹಣ ಕೊಡುವ ಅವಶ್ಯಕತೆ ಇಲ್ಲ. ಹಳೆ ಬಸ್ ಪಾಸ್ ತೋರಿಸಿ ಮತ್ತು ಕಾಲೇಜು ರಸೀದಿ ತೋರಿಸಿ ಓಡಾಡಬಹುದು. ಆದರೆ, ವಿದ್ಯಾರ್ಥಿಗಳಿಂದ ಟಿಕೆಟ್ ದರ ಸಂಗ್ರಹಿಸುತ್ತಿರುವುದಾಗಿ ನೀವು ಹೇಳುತ್ತಿರುವುದರಿಂದ, ಜುಲೈ10 ರ ವರೆಗೂ ಹಳೆಯ ಪಾಸ್ ಮುಂದುವರೆಸಲು ಮತ್ತೊಮ್ಮೆ ಜಿಲ್ಲೆಯ ಸಂಬಂಧಪಟ್ಟ ಎಲ್ಲರಿಗೂ ಈ ಕೂಡಲೇ ತಿಳಿಸಲಾಗುವುದು. ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಇತರರ ಈ ವರ್ಷದ ಶೈಕ್ಷಣಿಕ ವರ್ಷ ಮುಗಿಯುವವರೆಗೂ ಹಳೆಯ ಪಾಸ್ ಮುಂದುವರೆಸಲು ನೀವು ಸಲ್ಲಿಸಿರುವ ಬೇಡಿಕೆ ಕುರಿತು ನಿಗಮದ ಕಚೇರಿಗೆ ಬರೆದು ತಿಳಿಸಲಾಗುವುದು’ ಎಂದರು.

ಈ ವೇಳೆ ಎಐಡಿಎಸ್‌ಒ ಸಂಘಟನೆಯ ಮಹ್ಮದ್ ಅಶ್ರಫ್, ಪವಿತ್ರಾ, ಭಾಗ್ಯಜ್ಯೋತಿ, ಮಹ್ಮದ್ ಕೈಫ್, ರೇಣುಕಾ, ಸಿದ್ದಮ್ಮ, ಅಶ್ವಿನಿ, ನವಿತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.