ADVERTISEMENT

ನಕಲಿ ಗೊಬ್ಬರ: ಕರವೇ ಪ್ರತಿಭಟನೆ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 4:16 IST
Last Updated 28 ಜುಲೈ 2022, 4:16 IST
ಸುರಪುರದ ಕೃಷಿ ಇಲಾಖೆಯ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು
ಸುರಪುರದ ಕೃಷಿ ಇಲಾಖೆಯ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು   

ಸುರಪುರ: ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಗೊಬ್ಬರ ವ್ಯಾಪಾರಿಯೊಬ್ಬರು ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ರೈತರೊಂದಿಗೆ ಬುಧವಾರ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ
ನಡೆಸಿದರು.

ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶನಾಯಕ ಭೈರಿಮರಡಿ, ‘ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಗಿ 10 ಗೊಬ್ಬರ ಚೀಲಗಳನ್ನು ಖರೀದಿಸಿದ್ದರು. ಗೊಬ್ಬರ ಹೊಲಕ್ಕೆ ಹಾಕಲು ಹೋದಾಗ ಮರಳು ಮಿಶ್ರಣ ಮಾಡಿದ್ದು ಕಂಡು ಬಂದಿದೆ’ ಎಂದರು.

‘ನಕಲಿ ಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಲೇ ಇದೆ. ಅಧಿಕಾರಿಗಳು ತಕ್ಷಣ ಇಂತಹ ವರ್ತಕರ ಮೇಲೆ ಕಠಿಣ ಕ್ರಮ ಜರುಗಿಸಿ ಅವರ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಭೀಮುನಾಯಕ ಮಲ್ಲಿಭಾವಿ, ಹಣಮಗೌಡ ಶಖಾಪುರ, ಶ್ರೀನಿವಾಸ ಭೈರಿಮಡ್ಡಿ, ಆನಂದ
ಮಾಚಗುಂಡಾಳ, ಸೋಮಯ್ಯ ಹಾಲಗೇರಾ, ಮರಲಿಂಗಪ್ಪ ಅಡ್ಡೊಡಗಿ, ನಾಗರಾಜ ಡೊಣ್ಣಿಗೇರಿ, ದೇವಿಂದ್ರಪ್ಪಗೌಡ ಚಂದಲಾಪುರ ಸೇರಿದಂತೆ ಕಾರ್ಯಕರ್ತರು, ಮುಖಂಡರು ಇದ್ದರು.

ಪ್ರಕರಣ ದಾಖಲು: ಪ್ರತಿಭಟನೆಗೆ ಸ್ಪಂದಿಸಿದ ಕೃಷಿ ಅಧಿಕಾರಿಗಳು ನಕಲಿ ರಸಗೊಬ್ಬರ ಮಾರಾಟ ಮಾಡಿದ ಆರೋಪ ಹೊತ್ತಿರುವ ಬಾದ್ಯಾಪುರದ ಮಂಜುನಾಥ ಕೃಷಿ ಕೇಂದ್ರದ ಮೇಲೆ ಬುಧವಾರ ಮೇಲೆ ದಾಳಿ
ನಡೆಸಿದರು.

‘ಅನಧಿಕೃತ ಗೋದಾಮು ಮತ್ತು ಸಂಶಯಾತ್ಮಕ ರಸಗೊಬ್ಬರ ಎಂದು ವರದಿ ಸಲ್ಲಿಸಲಾಗಿದೆ. ಗೋದಾಮು ಜಪ್ತಿ ಮಾಡಲಾಗಿದೆ. ರಸಗೊಬ್ಬರ ನಮೂನೆಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಗುರುನಾಥ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.