ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಪ್ರತಿಭಟನೆ

ಬಿಜೆಪಿ, ಕನ್ನಡಪರ ಸಂಘಟನೆಗಳು ಸೇರಿ 61 ಸಂಘಟನೆಗಳ ಪದಾಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 16:26 IST
Last Updated 10 ಜುಲೈ 2019, 16:26 IST
 ಯಾದಗಿರಿಯ ನಗರಸಭೆ ಬಳಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು
 ಯಾದಗಿರಿಯ ನಗರಸಭೆ ಬಳಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು   

ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11.30ವರೆಗೆ ನಗರದ ಮೈಲಾಪುರ ಅಗಸಿ ಬಳಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಗಾಂಧಿವೃತ್ತದ ಮೂಲಕ ವೀರಶೈವ ಕಲ್ಯಾಣ ಮಂಟಪ ಮಾರ್ಗವಾಗಿ ನಗರಸಭೆ ಕಚೇರಿ ಬಳಿ ಆಗಮಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತಿಚೆಗೆ ಜಿಲ್ಲೆಯ ಚಂಡರಕಿ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ವೇಳೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇಲ್ಲ ಎನ್ನುವ ಮೂಲಕ ಜಿಲ್ಲೆಯ ಜನರ ಶಾಪಕ್ಕೆ ಕಾರಣವಾಗಿದ್ದಾರೆ. ಇದರಿಂದ ಇಲ್ಲಿಯ ಜನರು ಮುಖ್ಯಮಂತ್ರಿಗೆ ಶಾಪ ಹಾಕಿದ್ದರಿಂದ ತಮ್ಮ ಪದವಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಭಾಗದ ಜನರು ಬಡವರಾಗಿಯೇ ಉಳಿಯಬೇಕೆ ಎಂದು ಪ್ರಶ್ನಿಸಿದರು.

ವೈದ್ಯಕೀಯ ಕಾಲೇಜು ಓದಲು ಮಾತ್ರವಲ್ಲ; ಈ ಭಾಗದ ರೋಗಿಗಳಿಗೆ ಹಾಗೂ ಅಪೌಷ್ಟಿಕತೆ ನಿವಾರಣೆ ಇದರಿಂದ ಸಾಧ್ಯವಾಗಲಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಆಗಿತ್ತು. ಆದರೆ, ಈ ಬಗ್ಗೆ ಕಾಂಗ್ರೆಸ್‌ನವರೆ ಕಾಲೇಜಿಗಾಗಿ ಕಾಳಜಿ ತೋರಿಸುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಸುರಪುರ ಶಾಸಕ ರಾಜು ಗೌಡ ಸೇರಿದಂತೆ ಬಿಜೆಪಿ ಶಾಸಕರು ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ಹೈ.ಕ. ಭಾಗದಲ್ಲಿ ಸಂವಿಧಾನ 371ನೇ (ಜೆ) ಕಲಂ ತಿದ್ದುಪಡಿಯಾಗಿದೆ. ಪ್ರತಿ ವರ್ಷ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದಾರೆ. ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ಅಂತವರಿಗೆ ಅವಕಾಶಗಳು ಸಿಗುತ್ತಿದ್ದವು ಎಂದು ತಿಳಿಸಿದರು.

ADVERTISEMENT

ಇಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ನಗರವು ಪ್ರಗತಿಯತ್ತ ಸಾಗಬಹುದು. ಸಾವಿರಾರು ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಇಂತಹ ಮಹತ್ವದ ಯೋಜನೆ ಬಗ್ಗೆ ಮುಖಮಂತ್ರಿಗಳು ಉದಾಸೀನತೆ ತಾಳಿರುವುದು ಸರಿಯಲ್ಲ. ಕೂಡಲೇ ಕಾಲೇಜು ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ, ಈ ಭಾಗವನ್ನು ಸರ್ಕಾರ ನಿರ್ಲಕ್ಷಿಸಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳಬೇಕಾಗುತ್ತದೆ. ವೈದ್ಯಕೀಯ ಕಾಲೇಜು ಬರುವುದರಿಂದ ಈ ಭಾಗದ ಆರ್ಥಿಕ ಸ್ಥಿತಿ ಹೆಚ್ಚಳವಾಗುತ್ತದೆ. ಇದು ಬಡ ಜನರಿಗೆ ಉಪಯೋಗವಾಗುತ್ತದೆ. ಹಣ ಉಳಿಸಲು ಸರ್ಕಾರ ವೈದ್ಯಕೀಯ ಕಾಲೇಜು ಬೇಡ ಎಂದು ನಾಟಕವಾಡುತ್ತಿದೆ ಎಂದು ದೂರಿದರು.

ಕುಮಾರಸ್ವಾಮಿ ಅವರು ಮಂಡ್ಯ ಹಾಸನಕ್ಕೆ ಸೀಮಿತ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ಇಡೀ ರಾಜ್ಯಕ್ಕೆ ಸಿಎಂ ಆಗಿಲ್ಲ. ಹೊಳೆನರಸೀಪುರಕ್ಕೆ ಎಂಜಿನಿಯರ್ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ, ಈಗಾಗಲೇ ಹಾಸನದಲ್ಲಿ ಎಂಜಿನಿಯರ್ ಕಾಲೇಜು ಇದ್ದರೂ ಎರಡೆರಡು ಕಾಲೇಜು ಯಾಕೆ ಎಂದು ಪ್ರಶ್ನಿಸಿದರು.

’ಮಂಡ್ಯಕ್ಕೆ ₹ 8,600 ಕೋಟಿ ಹಣ ನೀಡಿ ನನ್ನ ಮಗನನ್ನು ಗೆಲ್ಲಿಸಿ ಎಂದು ಅಂಗಲಾಚಿದ್ದಾರೆ. ಆದರೆ, ಅಲ್ಲಿಯ ಜನ ತಕ್ಕ ಪಾಠ ಕಲಿಸಿದ್ದಾರೆ. ಗ್ರಾಮ ವಾಸ್ತವ್ಯವನ್ನು ತೋರಿಕೆಯ ವಾಸ್ತವ್ಯ ಮಾಡಿದ್ದಾರೆ‘ ಎಂದು ಆಪಾದಿಸಿದರು.

‘ಕಾಂಗ್ರೆಸ್‌ಗೆ ಬುದ್ಧಿಯಿಲ್ಲ. ಅವರ ಬಳಿ ಹೋಗಿ ನಿಮ್ಮನ್ನೆ ಸಿಎಂ ಮಾಡುತ್ತೇವೆ ಎಂದು ಮಂಡಿಯೂರಿದ್ದಾರೆ. ರಾಹುಲ್ ಗಾಂಧಿ ಕರಣಾಮಯಿ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಹೀಗಾಗಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶೀಘ್ರ ಹಣ ಮಂಜೂರು ಮಾಡಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಸಿಎಂ ಆದ ನಂತರ ಕಾಲೇಜು ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಸಿಗಲಿ ಎಂದು ಆಶಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಪ್ರತಿಷ್ಠಾನ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ವೈದ್ಯಕೀಯ ಕಾಲೇಜಿಗೆ ಸರ್ಕಾರ ಹಣ ನೀಡದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಹೆಚ್ಚಲಿದೆ ಎಂದರು.

ಕಸಾಪ, ಸಾಹಿತಿಗಳು, ಜಿಲ್ಲಾ ವಕೀಲರ ಸಂಘ, ಉತ್ತರ ಕರವೇ ಅಧ್ಯಕ್ಷ ಶರಣು ಗದ್ದುಗೆ, ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಮುದ್ನಾಳ, ಕನ್ನಡ ರಕ್ಷಣಾ ವೇದಿಕೆ ಚಂದ್ರಶೇಖರ ದಾಸನಕೇರಿ, ಕರ್ನಾಟಕ ರಣಧೀರ ಪಡೆ ಭಾಸ್ಕರ್ ಅಲ್ಲಿಪುರ, ಅಂಬೇಡ್ಕರ್ ಯುವ ಸೇನೆ ಅನಿಲ್‌ ಕುಮಾರ್, ಆಟೋ ಚಾಲಕರ ಸಂಘ ಮಲ್ಲಿಕಾರ್ಜುನ ಸಾಂಗ್ಲಿ, ಮಲ್ಲು ರಾಮಸಮುದ್ರ, ಜೈ ಕರ್ನಾಟಕ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ ಅವರ ಮೂಲಕ ಮುಖ್ಯಮಂತ್ರಿಗೆ ಕುಮಾರ ಸ್ವಾಮಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಅಯ್ಯಣ್ಣ ಹುಂಡೇಕಾರ್, ಸಿ.ಎಂ.ಪಟ್ಟೇದಾರ, ಮಲ್ಲಣಗೌಡ ಹತ್ತಿಕುಣಿ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಶ್ರೀನಿವಾಸರೆಡ್ಡಿ ಚನ್ನೂರ, ಚನ್ನಾರೆಡ್ಡಿ ಬಿಳ್ಹಾರ್, ಉಮಾರೆಡ್ಡಿ ನಾಯ್ಕಲ್, ಮಹೇಶ್ ರೆಡ್ಡಿ, ಸಿದ್ದಪ್ಪ ಹೊಟ್ಟಿ, ಕರವೇ ಶರಣು ಗದ್ದುಗೆ, ಹನುಮಾನದಾಸ ಮುಂದಡಾ, ಭೀಮಣ್ಣಗೌಡ ಕ್ಯಾತನಾಳ, ಲಲಿತಾ ಅನಪುರ, ರಮಾದೇವಿ, ಅಂಬಯ್ಯ ಶಾಬಾದಿ, ಹಣಮಂತ ಇಟಗಿ, ಮಾರುತಿ ಕಲಾಲ್, ಸ್ವಾಮಿದೇವ ದಾಸನಕೇರಿ, ಶರಣಗೌಡ ಬಾಡಿಯಾಳ, ಎಸ್.ಪಿ.ನಾಡೇಕರ್, ಸುರೇಶ ಮುದ್ನಾಳ, ವಿಲಾಸ ಪಾಟೀಲ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.