ADVERTISEMENT

ಕಾಲುವೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:31 IST
Last Updated 19 ಫೆಬ್ರುವರಿ 2020, 11:31 IST
ಸುರಪುರದಲ್ಲಿ ಸೋಮವಾರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ಸೋಮವಾರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು   

ಸುರಪುರ: ನಾರಾಯಣಪುರ ಎಡದಂಡೆ ಕಾಲುವೆ 6ರ ಅಡಿಯ ಲ್ಯಾಟರಲ್ ನಂ.12 ಸಬ್ ಲ್ಯಾಟರಲ್ 6 ಮತ್ತು 8ರ ಉಪ ಕಾಲುವೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಉಪ ಕಾಲುವೆಗಳು ಹಾಳಾಗಿ ಹೋಗಿದ್ದು, ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಕಾಲುವೆ ರಿಪೇರಿ ಮಾಡಲು ರಿ–ಮಾಡಲಿಂಗ್ ಅನುದಾನ ಬಂದಿದೆ. ಆದರೂ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಅವಶ್ಯಕತೆ ಇರುವ ಸ್ಥಳಗಳನ್ನು ಬಿಟ್ಟು, ತಮ್ಮ ಮನಸ್ಸಿಗೆ ಬಂದಂತೆ ಬೇರೆ ಕಡೆಗಳಲ್ಲಿ ರಿಪೇರಿ ಮಾಡಲಾಗುತ್ತಿದೆ. ಈ ಕುರಿತು ಲೋಕಾಯುಕ್ತರಿಂದ ತನಿಖೆ ಯಾಗಬೇಕು’ ಎಂದು ಒತ್ತಾಯಿಸಿದರು.

ಎಂ.ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಟೆಂಡರ್ ಉಳಿತಾಯದ ಈ ಭಾಗದ ಹಣವನ್ನು ಬಬಲೇಶ್ವರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಕೂಡ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಕ್ಷಣ ಉಪ ಕಾಲುವೆಗಳನ್ನು ರಿಪೇರಿ ಮಾಡಬೇಕು. ಅವಶ್ಯಕತೆ ಇರುವ ರೈತರಿಗೆ ತೆರೆದ ಬಾವಿ ನಿರ್ಮಾಣ, ಸಾಮೂಹಿಕ ಗಂಗಾ ಕಲ್ಯಾಣ ಯೋಜನೆ, ಪಿಕಪ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಶಹಾಪೂರ ತಾಲ್ಲೂಕಿನ ವನದುರ್ಗ ಕೆಬಿಜೆಎನ್‍ಎಲ್ ವಸತಿ ಗೃಹಗಳು ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಫೆ.24ರಂದು ಭೀಮರಾಯನ ಗುಡಿಮುಖ್ಯ ಎಂಜಿನಿ ಯರ್ ಕಚೇರಿ ಮುಂದೆ ರೈತರ ಜತೆ ಯಲ್ಲಿ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ನಂತರ ಪ್ರತಿಭಟನಾಕಾರರು ಗ್ರೇಡ್-2 ತಹಶೀಲ್ದಾರ್ ಸುಫೀಯಾ ಸುಲ್ತಾನ್ ಅವರಿಗೆ ಮನವಿ ಸಲ್ಲಿಸಿದರು. ಜೆಡಿಎಸ್ ಮುಖಂಡ ಉಸ್ತಾದ್ ವಜಾಹತ್ ಹುಸೇನ್, ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಶರಣಪ್ಪ ಪೊಲೀಸ್ ಪಾಟೀಲ್, ದೇವಿಂದ್ರಪ್ಪ ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.