ADVERTISEMENT

ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು: ಮಾಜಿ ಶಾಸಕ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:26 IST
Last Updated 15 ಫೆಬ್ರುವರಿ 2021, 6:26 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನವಶ್ಯಕ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಕೊಡೇಕಲ್ಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನವಶ್ಯಕ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಕೊಡೇಕಲ್ಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು   

ಕೊಡೇಕಲ್ಲ (ಹುಣಸಗಿ): ‘ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಅನವಶ್ಯಕವಾಗಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಕೊಡೇಕಲ್ಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

‘ಗೆದ್ದಲಮರಿ ಹಾಗೂ ತಾಂಡಾ ಸೇರಿದಂತೆ ಇತರ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ಪ್ರಕರಣ ದಾಖಲಿಸುವ ಮೂಲಕ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತನನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು’ ಎಂದು ರಾಜಾ ವೆಂಕಟಪ್ಪನಾಯಕ ಎಚ್ಚರಿಕೆ ನೀಡಿದರು.

ವಿಷಯ ಗೊತ್ತಾಗುತ್ತಿದ್ದಂತೆಯೇ ತಂಡೋಪತಂಡವಾಗಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೂರು ತಾಸು ನಡೆದ ಪ್ರತಿಭಟನೆಯಲ್ಲಿ ತಾಂಡಾದ ಮಹಿಳೆಯರು ಮಾತನಾಡಿದರು. ಹುಣಸಗಿ ಸಿಪಿಐ ದೌಲತ್.ಎನ್.ಕೆ ಅವರು ಎಷ್ಟೇ ಮನವಿ ಮಾಡಿಕೊಂಡರೂ ಪ್ರತಿಭಟನೆ ಮುಂದುವರೆಯಿತು.

ADVERTISEMENT

ಬಳಿಕ ಸ್ಥಳಕ್ಕೆ ಬಂದ ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಆರೋಪಿಯನ್ನು ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರಕರಣ: ‘ಜನವರಿ 12 ರಂದು ತಾಲ್ಲೂಕಿನ ಗೆದ್ದಮರಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ ತಿರುಪತಿ ಎಂಬುವರನ್ನು ಮೂವರು ಅಪಹರಿಸಿದ್ದಾರೆ ಎಂದು ಕೊಡೇಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಿಚಾರಣೆಗಾಗಿ ಕರೆತರಲಾಗಿತ್ತು’ ಎಂದು ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲನಾಯಕ, ರಾಜಾ ಕುಮಾರನಾಯಕ, ನಾಗಣ್ಣ ಸಾಹುದಂಡಿನ್, ವಿಠ್ಠಲ ಯಾದವ, ಮಲ್ಲಣ್ಣ ಸಾಹು, ಆರ್.ಎಂ.ರೇವಡಿ, ಶಂಕರ ಚವ್ವಾಣ, ಗೋಪಾಲ ಅಮಲಿಹಾಳ, ನಾಗರಾಜ ಜೋಗುರು, ಅಮರೇಶ ಕೋಳೂರ, ಬಸವರಾಜ ಬರದೇವನಾಳ, ತಿರುಪತಿ ವಡಗೇರಿ, ಶಾಂತಿಲಾಲ್ ರಾಜನಕೋಳೂರ, ಶಾಂತಪ್ಪ ಮೇಸ್ತಕ, ಚಿದಂಬರ ದೇಸಾಯಿ, ಬಸವರಾಜ ಹುಡೇದ, ಬಸವರಾಜ ಕಡದರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.