ADVERTISEMENT

ವಾಸ್ಟರ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 16:32 IST
Last Updated 11 ನವೆಂಬರ್ 2020, 16:32 IST
ಯಾದಗಿರಿಯ ಅಖಂಡ ಕರ್ನಾಟಕ ಗೊಂದಳಿ ಸಮಾಜ ಹಾಗೂ ಶ್ರೀರಾಮ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಯಾದಗಿರಿಯ ಅಖಂಡ ಕರ್ನಾಟಕ ಗೊಂದಳಿ ಸಮಾಜ ಹಾಗೂ ಶ್ರೀರಾಮ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಯಾದಗಿರಿ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಸುರೇಶ ವಾಸ್ಟರ (ಜ್ಯೋತಿಷಿ) ಕೊಲೆಯನ್ನು ಖಂಡಿಸಿ ಅಖಂಡ ಕರ್ನಾಟಕ ಗೊಂದಳಿ ಸಮಾಜದ ಯಾದಗಿರಿ ಘಟಕ, ಶ್ರೀರಾಮ ಸೇನೆ ಹಾಗೂ ಅಲೆಮಾರಿ ಸಮುದಾಯಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಕ್ಷುಲ್ಲಕ ಕಾರಣಕ್ಕಾಗಿ ಸುರೇಶ ವಾಸ್ಟರ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಅವರ ಮನೆಯ ಮುಂದೆ ಎಸೆದು ಅವರ ಕುಟುಂಬದವರಿಗೆ ಜೀವ ಬೇದರಿಕೆ ಹಾಕಿರುವದು ಖಂಡನೀಯ‘ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಳಿ ಸಮಾಜವು ಅಲೆಮಾರಿ ಸಮುದಾಯವಾಗಿದ್ದು, ಶಾಂತಿಪ್ರಿಯರಾಗಿದ್ದಾರೆ. ಎಲ್ಲಾ ಧರ್ಮದವರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇಂಥ ಸಮಾಜದ ಬಡಪಾಯಿ ಜ್ಯೋತಿಷಿಯನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಮೃತ ಕುಟುಂಬಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಆರೋಪಿಗಳಿಗೆ ಶಿಕ್ಷೆಯಾಗದಿದ್ದರೆ ಹಾಗೂ ಮೃತ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಾಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಖಂಡ ಕರ್ನಾಟಕ ಗೊಂದಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಅಶೋಕ ವಾಟ್ಕರ ಹಾಗೂ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಮಾತನಾಡಿದರು.

ಇದಕ್ಕೂ ಮುಂಚೆ ಪ್ರತಿಭಟನಾಕಾರರು ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ ಮನವಿ ಪತ್ರ ಸ್ವೀಕರಿಸಿದರು.

ಗೊಂದಳಿ ಸಮಾಜದ ಮುಖಂಡರಾದ ನಾಮದೇವ ವಾಟ್ಕರ, ಅಮೃತ ವಾಟ್ಕರ, ನಾಮದೇವ ಸೂರ್ಯವಂಶಿ, ನರಸಿಂಗ ಮುಕ್ಕೆ, ಅಂಜನೇಯ ಗುರುಡಕರ, ಶಿವಾಜಿ ಮುಕ್ಕೆ, ರಮೇಶ ಅಟಕ್, ಬಸವರಾಜ ವಾಟ್ಕರ, ವಿಜಯ, ಮಲ್ಲು ಸೂರ್ಯವಂಶಿ, ಸುನಿಲ್ ವಾಟ್ಕರ, ಅನಿಲ್ ವಾಟ್ಕರ, ನವೀನ ವಾಟ್ಕರ, ಹೇಳವ ಸಮಾಜದ ಮುಖಂಡರಾದ ಯಲ್ಲ ಕೋರಿ, ರಾಜಪ್ಪ ಯರಗೊಳ, ದೇವಿಂದ್ರಪ್ಪ ಬೆಂಗಳೂರು, ಭೀಮರಾಯ ಹಳಿಮನಿ, ಮರೆಪ್ಪ ಮಾಸ್ಟರ, ಶಿಳ್ಳೆಕ್ಯಾತೆ ಸಮಾಜದ ಸಾಬಣ್ಣ ಮಿನಗಾರ, ನರಸಪ್ಪ ಮಿನಗಾರ ಹಾಗೂ ಬೈಲಪತ್ತರ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.