ADVERTISEMENT

ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ದೋರನಹಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ; ಪೊಲೀಸ್‌ ಇಲಾಖೆ ವೈಫಲ್ಯಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:08 IST
Last Updated 11 ಜನವರಿ 2023, 7:08 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಯುಕೆಪಿ ಕ್ಯಾಂಪ್‌ನಲ್ಲಿ ನಡೆದ ಸಿಲಿಂಡರ್‌ ಸ್ಫೋಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಯುಕೆಪಿ ಕ್ಯಾಂಪ್‌ನಲ್ಲಿ ನಡೆದ ಸಿಲಿಂಡರ್‌ ಸ್ಫೋಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಶಹಾಪುರ ತಾಲ್ಲೂಕಿನ ದೋರನಹಳ್ಳಿ ಯುಕೆಪಿ ಕ್ಯಾಂಪ್‌ನಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿ ನಡೆದ ಸಿಲಿಂಡರ್‌ ಸ್ಫೋಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಮದ್ದರಕಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ರೈತ ಸಂಘದ ಮುಖಂಡರು, ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, 2022ರ ಫೆಬ್ರುವರಿ 25ರಂದು ದೋರನಹಳ್ಳಿ ಕ್ಯಾಂಪ್‌ನ ಸೀಮಂತ ಸಮಾರಂಭದಲ್ಲಿ ದುರ್ಘಟನೆ ಸಂಭವಿಸಿತ್ತು. ಸಿಲಿಂಡರ್‌ ಸ್ಫೋಟದಲ್ಲಿ 25 ಜನ ಗಾಯಗೊಂಡು 15 ಜನ ಮೃತಪಟ್ಟಿದ್ದರು. ಅವರಿಗೆ ಸೂಕ್ತ ಪರಿಹಾರ ನೀಡಬೇಕು. ದೂರುದಾರನನ್ನೇ ಆರೋಪಿಯನ್ನಾಗಿ ಮಾಡಿದ್ದು, ಇದು ಅವೈಜ್ಞಾನಿಕ. ಪೊಲೀಸರು ಕಾರ್ಯಕ್ರಮ ಅಯೋಜಕರನ್ನೇ ಆರೋಪಿಯನ್ನಾಗಿ ಮಾಡಿ ವೈಫಲ್ಯ ತೋರಿಸಿದ್ದಾರೆ. ಇದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು
ಆರೋಪಿಸಿದರು.

ADVERTISEMENT

ತನಿಖೆ ಸಮಯದಲ್ಲಿ ಪೊಲೀಸರು ನಿಕ್ಷಪ್ತವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ಮಾಡದೇ ಆರೋಪಿ 1 ಮತ್ತು 2 ಮಾಡಿದ್ದಾರೆ. ಇಂಧನ ಗ್ಯಾಸ್‌ ಕಂಪನಿಯ ಬೆಳಗಾವಿ ಡಿವಿಜನ್‌ ಮ್ಯಾನೇಜರ್‌ ಕೈಗೊಂಬೆಯಂತೆ ವರ್ತಿಸಿ ಮೃತ ಕುಟುಂಬದ ವಾರಸುದಾರರಿಗೆ ಮತ್ತು ಗಾಯಾಳುಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಂಗ ತನಿಖೆ ಮಾಡಲು ಆಗ್ರಹಿಸಿ ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಡಿಸೆಂಬರ್‌ 14ರಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿದೆ. ಡಿಸೆಂಬರ್‌ 16ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ. ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಆದರೆ, ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಪಾದಿಸಿದರು.
ಈ ಪ್ರಕರಣವನ್ನು ನ್ಯಾಯಾಂಗ
ತನಿಖೆಗೆ ಆದೇಶಿಸಿ ನೊಂದ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಒಂದು ವೇಳೆ ನ್ಯಾಯಾಂಗ ತನಿಖೆಗೆ ಆದೇಶ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುನ್ನ ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೈಕ್, ವಾಹನಗಳ ಸಮೇತ ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಿ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದೋರನಹಳ್ಳಿ ಹಿರೇಮಠದ ವೀರಮಹಾಂತ ಶಿವಾಚಾರ್ಯರು, ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ರಾಜಾ ವಸಂತ ನಾಯಕ, ಸಾಹೇಬಗೌಡ ಹೇರಂಡಿ, ಬಸವರಾಜ, ಗಣಪತ್ರಾಯಗೌಡ ಜೋಳದ, ರೈತ ಸಂಘದ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ನಿಂಗಣ್ಣಗೌಡ ಪೊಲೀಸ್‌ ಪಾಟೀಲ, ಮಹೇಶ ಮಂಡಗಳ್ಳಿ, ಚೆನ್ನಬಸು ವಾಲಿ, ವಿಜಯರಾಜ ತಿಂಥಣಿ, ಶಿವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.