ADVERTISEMENT

‌ವೇತನಕ್ಕಾಗಿ ವಸತಿ ನಿಲಯ ಕಾರ್ಮಿಕರಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಚಳವಳಿ

​ಪ್ರಜಾವಾಣಿ ವಾರ್ತೆ
Published 27 ಮೇ 2021, 16:38 IST
Last Updated 27 ಮೇ 2021, 16:38 IST
ಯಾದಗಿರಿಯಲ್ಲಿ ಆನ್‌ಲೈನ್ ಪ್ರತಿಭಟನೆ ಉದ್ದೇಶಿಸಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕಾಮ್ರೇಡ್ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿದರು
ಯಾದಗಿರಿಯಲ್ಲಿ ಆನ್‌ಲೈನ್ ಪ್ರತಿಭಟನೆ ಉದ್ದೇಶಿಸಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕಾಮ್ರೇಡ್ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿದರು   

ಯಾದಗಿರಿ: ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕ ಸಂಘದಿಂದ (ಎಐಯುಟಿಯುಸಿಗೆ ಸಂಯೋಜಿತ) ಗುರುವಾರ ಆನ್‌ಲೈನ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಾದ್ಯಂತ ಸಾವಿರಾರು ಕಾರ್ಮಿಕರು ತಾವಿದ್ದಲ್ಲಿಯೇ ತಮ್ಮ ಬೇಡಿಕೆಗಳನ್ನೊಳಗೊಂಡ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ಕಾಮ್ರೇಡ್ ಕೆ.ಸೋಮಶೇಖರ್ ಯಾದಗಿರಿ, ಕೋವಿಡ್ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರಗಳ ಸಂವೇದನಾ ರಹಿತ ತಪ್ಪು ನಿರ್ಧಾರದಿಂದ ಕಷ್ಟ ಇನ್ನಷ್ಟು ಹೆಚ್ಚಿಸಿವೆ. ರಾಜ್ಯದ ವಿವಿಧ ಇಲಾಖೆಗಳ ಹಾಸ್ಟೆಲ್, ವಸತಿಶಾಲೆ, ಆಶ್ರಮ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾದ ವೇತನವ ಅಥವಾ ಇನ್ಯಾವುದೇ ಸೌಲಭ್ಯಗಳನ್ನಾಗಲೀ ಸಮರ್ಪಕವಾಗಿ ನೀಡುತ್ತಿಲ್ಲ. ಕೊರೊನಾ ಎರಡೂ ಅಲೆಯ ಈ ಸಂದರ್ಭದಲ್ಲಿ ಈ ಸಮಸ್ಯೆಯು ಉಲ್ಬಣವಾಗಿದ್ದು, ಕಳೆದ ಹಲವಾರು ತಿಂಗಳಿಂದ ವೇತನವನ್ನೇ ನೀಡಿಲ್ಲ. ಕುಟುಂಬಗಳ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಸರ್ಕಾರಗಳೇ ಈ ರೀತಿ ಮಾಡಿದರೆ ಕಾರ್ಮಿಕರ ಗತಿ ಏನಾಗಬೇಕು. ಕಾರ್ಮಿಕರು ತಾವು ದುಡಿದ ಹಣವನ್ನು ಕೇಳುತ್ತಿದ್ದಾರೆಯೇ ಹೊರತು ಇನ್ನೆನ್ನೂ ಕೇಳಿತ್ತಿಲ್ಲ ಎಂದು ಕಿಡಿಕಾರಿದರು.

ADVERTISEMENT

ಬಿಕ್ಕಟ್ಟಿನ ಸಂದರ್ಭದಲ್ಲಿ ನಾವೇನೂ ನಮ್ಮ ಸೇವೆಯನ್ನು ಕಾಯಂ ಮಾಡಿ ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದು ಕೇಳುತ್ತಿಲ್ಲ. ವೇತನ ಹೆಚ್ಚು ಮಾಡಿ ಎಂದು ಕೇಳುತ್ತಿಲ್ಲ. ಬದಲಿಗೆ ನಾವು ದುಡಿದ ಹಣವನ್ನು ನಮಗೆ ಕೊಡಿ, ಸಂಬಳವನ್ನು ನಿಯಮಿತವಾಗಿ ಕೊಡಿ. ಹಾಗೆಯೇ ಕೋವಿಡ್ ಕೇರ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅಗತ್ಯ ಸುರಕ್ಷಾ ಸಾಮಗ್ರಿಗಳು ಮತ್ತು ಕೊರೊನಾ ವಾರಿಯರ್ಸ್‍ಗೆ ನೀಡುವ ಸೌಲಭ್ಯಗಳನ್ನು ನೀಡಬೇಕು ಎಂದು ಕೇಳುತ್ತಿದ್ದೇವೆ. ಆದರೆ, ಸರ್ಕಾರಕ್ಕೆ ಇದಕ್ಕೆ ಸ್ಪಂದಿಸುವ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ಗಳು ಮುಚ್ಚಿದ್ದು, ನಿಮ್ಮನ್ನು ಸೇವೆಯಿಂದ ಬಿಡುಗಡೆ ಮಾಡಿದ್ದೇವೆ. ಹಾಗಾಗಿ ಸಂಬಳ ನೀಡಲಾಗುವುದಿಲ್ಲ ಎಂದು ಮಾತನಾಡುವ ಅಧಿಕಾರಿಗಳು, ಕಾರ್ಮಿಕರನ್ನು ಹೇಳದೇ ಕೇಳದೇ ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಜೊತೆಗೆ ಕಾರ್ಮಿಕರಿಂದ ಸ್ವಇಚ್ಛೆಯಿಂದ ನಾವು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ ಎಂದು ಬಲವಂತವಾಗಿ ಬರೆಸಿಕೊಳ್ಳುತ್ತಿರುವುದು ಸರಿಯೇ ಎಂದರು. ಇಂಥ ಅನ್ಯಾಯದ ವಿರುದ್ಧ ಪ್ರಬಲವಾದ ಹೋರಾಟ ಮಾಡಬೇಕಿದೆ ಎಂದರು.

ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ವಿ.ಭಟ್,ರಾಜ್ಯ ಮುಖಂಡ ಕಾಮ್ರೇಡ್ ಚಂದ್ರಶೇಖರ ಮೇಟಿ ಮಾತನಾಡಿದರು.

ಸಂಘದ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಜಿಲ್ಲಾ ಮುಖಂಡರಾದ ರಾಮಲಿಂಗಪ್ಪ ಬಿ.ಎನ್, ಮಾಪಣ್ಣ, ಭಾಗಪ್ಪ, ಶ್ರೀಕಾಂತ, ರಮೇಶ್, ಸಣ್ಣ ಮಲ್ಲಪ್ಪ, ಅಂಬಮ್ಮ, ಮರಳಮ್ಮ, ನಾಗಮ್ಮ, ಲಕ್ಷ್ಮೀ, ಶಾಂತಮ್ಮ, ಹನುಮಾಕ್ಷಿ ಸೇರಿದಂತೆ ಕಾರ್ಮಿಕರು ಆನ್‌ಲೈನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.