
ಯಾದಗಿರಿ: ‘ಉತ್ತಮ ಆರೋಗ್ಯವನ್ನು ಹಲವು ಮಾರ್ಗಗಳೊಂದಿಗೆ ನೈಸರ್ಗಿಕ ಕರೆ ಸಕಾಲಕ್ಕೆ ಪೂರೈಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಆ್ಯಸ್ಪಿರೇಷನ್ ಶೌಚಾಲಯವು ಸಾರ್ವಜನಿಕರಿಗೆ ಸದ್ಬಳಕೆಯಾಗಲಿ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದಲ್ಲಿ ವಿವಿಧ ಪ್ರದೇಶದಲ್ಲಿ ನಿರ್ಮಾಣವಾದ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಾರ್ವಜನಿಕರ ಅನುಕೂಲಕ್ಕಾಗಿ ಅದರಲ್ಲೂ ಗ್ರಾಮೀಣ ಭಾಗದಿಂದ ಬಂದು– ಹೋಗುವರ ಅನುಕೂಲಕ್ಕಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 2023-24ನೇ ಸಾಲಿನ ಎಸ್‌ಬಿಎಂ 2.O ಅನುದಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ಲುಂಬಿನಿ ಉದ್ಯಾನವನ ಮುಂಭಾಗದಲ್ಲಿ ಸುಮಾರು ₹ 30 ಲಕ್ಷ ಹಾಗೂ ಫಿಲ್ಟರ್ ಬೆಡ್ ಗಾರ್ಡನ್ ಸಮೀಪ ₹ 2.50 ಲಕ್ಷ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದರು.
‘ಶೌಚಾಲಯಗಳ ಉಸ್ತುವಾರಿ ವಹಿಸಿಕೊಂಡು ನಿರ್ವಹಣೆ ಮಾಡುವವರು ಸದಾ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಸಾಕಷ್ಟು ಇತ್ತು. ಅದನ್ನು ಮನಗಂಡು ನಗರದ ಮೂರು ಕಡೆಗಳಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಈ ವೇಳೆ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷಿಕಾಂತರೆಡ್ಡಿ, ಪೌರಾಯುಕ್ತ ಉಮೇಶ ಚವ್ಹಾಣ್, ಸಹಾಯಕ ಕಾರ್ಯಪಾಲ ಎಂಜಿನಿಯರ್ ವಿಶ್ವನಾಥರೆಡ್ಡಿ, ಪರಿಸರ ಎಂಜಿನಿಯರ್ ಪ್ರಶಾಂತ, ಕಿರಿಯ ಸಹಾಯಕ ಎಂಜಿನಿಯರ್‌ಗಳಾದ ಲೋಕೇಶ್ವರಿ, ತಾಯಪ್ಪ ಯಾದವ್, ಕಿರಿಯ ಆರೋಗ್ಯ ನಿರೀಕ್ಷಕರಾದ ಶಿವಪುತ್ರ, ಮಂಜುನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.