ADVERTISEMENT

ನಲ್ಲಚೆರು ಕೆರೆಯಿಂದ ನೀರು ಸರಬರಾಜು; ಅನುಮೋದನೆ

ಗುರುಮಠಕಲ್: ಸಾಮಾನ್ಯ ಸಭೆಯಲ್ಲಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:43 IST
Last Updated 24 ಜೂನ್ 2022, 3:43 IST
ಗುರುಮಠಕಲ್ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಲೆಕ್ಕಾಧಿಕಾರಿ ಅನೀಲಕುಮಾರ ಯರಗಾಲ ಖರ್ಚು-ವೆಚ್ಚಗಳ ಮಾಹಿತಿ ನೀಡಿದರು
ಗುರುಮಠಕಲ್ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಲೆಕ್ಕಾಧಿಕಾರಿ ಅನೀಲಕುಮಾರ ಯರಗಾಲ ಖರ್ಚು-ವೆಚ್ಚಗಳ ಮಾಹಿತಿ ನೀಡಿದರು   

ಗುರುಮಠಕಲ್: ಪಟ್ಟಣದ ನೀರಿನ ಅವಶ್ಯಕತೆಯನ್ನು ಪೂರೈಸಲು ಭೀಮಾ ಯೋಜನೆಯ ಮೂಲಕ ಯಾದಗಿರಿಯ ಭೀಮಾ ನದಿಯಿಂದ ನೀರು ಪಡೆಯಲಾಗುತ್ತಿದೆ. ಆದರೆ, ಪದೇ ಪದೇ ವ್ಯತ್ಯಯವಾಗುತ್ತಿರುುದರಿಂದ ಪಟ್ಟಣದ ನಲ್ಲಚೆರು ಕೆರೆಯಿಂದ ನೀರನ್ನು ಪಟ್ಟಣಕ್ಕೆ ಪೂರೈಕೆ ಮಾಡಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಪುರಸಭೆಯ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆಯ ಕುರಿತು ಚರ್ಚಿಸಿದ ಸದಸ್ಯರು, ನಲ್ಲಚೆರು ಕೆರೆಯಲ್ಲಿದ್ದ 13 ಕೊಳವೆ ಬಾವಿಗಳಲ್ಲಿ ಸದ್ಯ 2 ಮಾತ್ರ ಸುಸ್ಥಿತಿಯಲ್ಲಿವೆ, ಉಳಿದ 11 ಕೊಳವೆಬಾವಿಗಳನ್ನು ದುರಸ್ತಿಮಾಡಿದರೆ ಪಟ್ಟಣದ ಬೇಡಿಕೆಗೆ ತಕ್ಕಂತೆ ನೀರಿನ ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ನಲ್ಲಚೆರು ಕರೆ ನೀರಿನ ಬಳಕೆಗೆಯನ್ನು ಪುನರಾರಂಭಿಸಲು ₹33 ಲಕ್ಷ ಅನುದಾನ ಮೀಸಲಿಡಲು ಸದಸ್ಯರು ಅನುದಾನ ನೀಡಿದರು.

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗಾಗಿ ನಿವೇಶನ ಬಗ್ಗೆ ಪರಿಶೀಲಿಸುವಂತೆ ಖಾಜಾ ಮೈನೋದ್ದೀನ್ ತಿಳಿಸಿದರು.

ADVERTISEMENT

ಉದ್ಯಾನಗಳಾಗಿ ಗುರುತಿಸಿರುವ ಪ್ರದೇಶದ ಒತ್ತುವರಿಯಾಗದಂತೆ ಮುನ್ನೆಚ್ಚರಿಕೆವಹಿಸಿ ತಡೆಗೋಡೆ ನಿರ್ಮಿಸುವಂತೆ ಸದಸ್ಯ ಪಾಪಿರೆಡ್ಡಿ ಬುರ್ಜು ಕೋರಿದರು.

ಸದಸ್ಯರ ಸಲಹೆ-ಸೂಚನೆಗಳನ್ನು ಪರಿಗಣಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷ ಪಾಪಣ್ಣ ಮನ್ನೆ ಅಧಿಕಾರಿಗಳಿಗೆ ಸೂಚಿಸಿದರು.

ಟೌನ್ ಹಾಲ್ ನೂತನ ಕಟ್ಟಡವನ್ನು ತಾಲ್ಲೂಕಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒದಗಿಸಲು, 15 ಹಣಕಾಸು ಯೋಜನೆ, ಎಸ್.ಎಫ್.ಸಿ. ಅನುದಾನ, ಸಾರ್ವಜನಿಕ ನಿವೇಶನಗಳಿಗೆ (ಸಿಎ ಸೈಟ್) ತಡೆಗೋಡಿ ನಿರ್ಮಾಣ ಮಾಡಲು ಸಭೆಯಲ್ಲಿ ಅನುಮೋದಿಸಲಾಯಿತು.

ಪುರಸಭೆ ಲೆಕ್ಕಾಧಿಕಾರಿ ಅನೀಲಕುಮಾರ ಯರಗಾಲ ಪುರಸಭೆಯ ಖರ್ಚು-ವೆಚ್ಚಗಳನ್ನು ಮಂಡಿಸಿದರು, ಸಭೆಯಲ್ಲಿ ಅನುಮೋದಿಸಲಾಯಿತು.

ಉಪಾಧ್ಯಕ್ಷೆ ಭೀಮಮ್ಮ ಮುಕಡಿ, ಮುಖ್ಯಾಧಿಕಾರಿ ಲಕ್ಷ್ಮೀಬಾಯಿ ಕೋಟೆಗಾರ, ರವೀಂದ್ರರೆಡ್ಡಿ ಶೇರಿ, ಬಾಬು ತಲಾರಿ, ಅನ್ವರ್ ಅಹ್ಮದ್, ಕೃಷ್ಣಾ ಎಂ., ರೇಣುಕಾ ಪಡಿಗೆ, ಪವಿತ್ರ ಮನ್ನೆ, ಬಾಲಪ್ಪ ದಾಸರಿ, ನವಾಜರೆಡ್ಡಿ ಪಾಟೀಲ, ಜಯಶ್ರೀ, ಸಿರಾಜ್ ಚಿಂತಕುಂಟಿ ಇದ್ದರು.

ಸದಸ್ಯರ ಗೈರಿಗೆ ಆಕ್ರೋಶ: ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ‘ಅಧಿಕಾರದಲ್ಲಿರುವ ಜೆಡಿಎಸ್ ಸದಸ್ಯರೇ ಸಭೆಗೆ ಗೈರಾಗಿದ್ದಾರೆ, ಅಧ್ಯಕ್ಷರ ಸ್ವಪಕ್ಷದ ಸದಸ್ಯರೇ ಗೈರಾಗಿದ್ದು, ಇದು ಅಭಿವೃದ್ಧಿಯ ಕುರಿತ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಅಸಮದಾನವಿದ್ದರೆ ಅವರದೇ ಪಕ್ಷದ ಅಧ್ಯಕ್ಷರಿದ್ದು, ಮಾತನಾಡಬೇಕಿತ್ತು. ಹೀಗೆ ಗೈರಾದರೆ ಏನೆಂದುಕೊಳ್ಳಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.