ನಾರಾಯಣಪುರ: ಸ್ಥಳೀಯ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ನಾರಾಯಣಪುರ ಗ್ರಾಮದ ನರಸಿಂಹ ಆಚಾರ್ಯ ಕೊಳ್ಳಿ ಅವರ ಮನೆಯಿಂದ ಬೆಳಿಗ್ಗೆ 6 ಗಂಟೆಗೆ ಸಂಕೀರ್ತನೆ ಮಾಡುವ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಿಳೆಯರು ಮನೆಯಂಗಳವನ್ನು ರಂಗೋಲಿಯಿಂದ ಅಲಂಕರಿಸಿದ್ದರು. ರಾಯರ ಭಾವಚಿತ್ರವನ್ನು ಆರತಿ ಮಾಡುವುದರೊಂದಿಗೆ ಬರಮಾಡಿಕೊಂಡರು. ನಂತರ ಅಷ್ಟೋತ್ತರ, ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಪುಷ್ಪಗಳಿಂದ ಅಂಲಕೃತಗೊಂಡಿದ್ದ ಯತಿದ್ವಯರ ಬೃಂದಾವನಗಳಿಗೆ ಪಂಚಾಮೃತ ಅಭಿಷೇಕ,ನೈವೈದ್ಯ ಹಾಗೂ ಮಹಾ ಮಂಗಳಾರುತಿ ನೆರವೇರಿತು.
ಮಠದ ಅರ್ಚಕ ರಾಘವೇಂದ್ರ ಜೋಶಿ ಮಾರಲಬಾವಿ ಮಾತನಾಡಿ, ಆರಾಧನೆ ಮಹೋತ್ಸವದ ಅಂಗವಾಗಿ ಬುಧವಾರ ಮಧ್ಯಾಹ್ನ 1.30 ಗಂಟೆಗೆ ಮಠದಲ್ಲಿ ಪಲ್ಲಕ್ಕಿ ಉತ್ಸವ ಸೇರಿದಂತೆ ರಾಯರ ರಥೋತ್ಸವ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಗುರುರಾಜ ಭಜನಾ ಮಂಡಳಿ, ಛಾಯಾ ಭಗವತಿ ಭಜನಾ ಮಂಡಳಿ ಸದಸ್ಯರು ಭಜನೆಯನ್ನು ನಡೆಸಿಕೊಟ್ಟರು. ನಾರಾಯಣಪುರ, ರೋಡಲಬಂಡಾ, ಬರದೇವನಾಳ, ಕೊಡೇಕಲ್ಲ, ಹುಣಸಗಿ, ಕಾಮನಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.