ADVERTISEMENT

ಶಹಾಪುರ/ವಡಗೇರಾ: ಮನೆ, ಬೆಳೆ ಹಾನಿ: ಸಂತ್ರಸ್ತರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 5:25 IST
Last Updated 29 ಆಗಸ್ಟ್ 2022, 5:25 IST
ವಡಗೇರಾ ತಾಲ್ಲೂಕಿನ ನಾಯ್ಕಲ್-ಚಟ್ನಳ್ಳಿ ಗ್ರಾಮದ ಸೇತುವೆ ಮೇಲೆ ಹರಿದ ಹಳ್ಳದ ನೀರು
ವಡಗೇರಾ ತಾಲ್ಲೂಕಿನ ನಾಯ್ಕಲ್-ಚಟ್ನಳ್ಳಿ ಗ್ರಾಮದ ಸೇತುವೆ ಮೇಲೆ ಹರಿದ ಹಳ್ಳದ ನೀರು   

ಶಹಾಪುರ/ವಡಗೇರಾ: ಕಳೆದ ಎರಡು ದಿನದಿಂದ ಸುರಿದ ಧಾರಾಕಾರ ಮಳೆಯಿಂದ ಎರಡೂ ತಾಲ್ಲೂಕಿನ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜಮೀನುಗಳಲ್ಲಿ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಬೆಳೆಗೆ ಹಾನಿ ಉಂಟಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದು ಸಂತ್ರಸ್ತರು ಹೈರಾಣಾಗಿದ್ದಾರೆ.

‘ಪ್ರಾಥಮಿಕ ವರದಿಯಂತೆ ತಾಲ್ಲೂಕಿನಲ್ಲಿ ತಗ್ಗು ಪ್ರದೇಶದ40 ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಕೆಲವು ಕಡೆಗಳ ಮನೆಗಳ ಗೋಡೆಗಳುಭಾಗಶಃ ಕುಸಿದಿವೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಬೆಳೆ ಹಾನಿಯಾದ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ತ್ವರಿತವಾಗಿ ವರದಿ ನೀಡಲಾಗುವುದು’ ಎಂದು ತಹಶೀಲ್ದಾರ್ ಮಧುರಾಜ ಕೂಡ್ಲಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶನಿವಾರ ರಾತ್ರಿ ಸುರಿದ ಮಳೆಯಿಂದ ನಾಯ್ಕಲ್– ಚಟ್ನಳ್ಳಿ ರಸ್ತೆಯ ಮೇಲೆ ಹಳ್ಳದ ನೀರು ಹರಿದು ಸಂಚಾರ ಸ್ಥಗಿತಗೊಂಡಿದೆ. ನಾಯ್ಕಲ್ ಗ್ರಾಮದ ತಗ್ಗು ಪ್ರದೇಶದ ಸುಮಾರು 20ಕ್ಕೂ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗರು ತೊಂದರೆ ಅನುಭವಿಸುವಂತೆ ಆಗಿದೆ. ಮನೆಯಲ್ಲಿ ಸಂಗ್ರಹಿಸಿ ಇರಿಸಿದ್ದ ದವಸ ಧಾನ್ಯಗಳು ಮಳೆ ನೀರು ಪಾಲಾಗಿವೆ’ ಎನ್ನುತ್ತಾರೆ ನಾಯ್ಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾಜಾ ಮೈನುದ್ದೀನಜಮಶೇರಿ.

ADVERTISEMENT

‘ಮದರಕಲ್ ಶಾಲೆಯ ಆವರಣ ಒಳಗೆ ಮಳೆ ನೀರು ನಿಂತು, ವಿದ್ಯಾರ್ಥಿಗಳ ಒಳ–ಹೊರ ಹೋಗಲು ತೊಂದರೆ ಆಗಿದೆ. ಬೆಂಡಬೆಂಬಳಿ ಗ್ರಾಮದಲ್ಲಿ ಕೆಲ ಮನೆಗಳ ಒಳಗೆ ನೀರು ನಿಂತಿದೆ. ತಗ್ಗು ಪ್ರದೇಶದಲ್ಲಿ ಸಂಗ್ರಹವಾದ ನೀರನ್ನು ಬೇರೆಡೆ ಹರಿದು ಹೋಗುವಂತೆ ಮಾಡಲು ಗ್ರಾಮ ಪಂಚಾಯಿಸಿ ಸಿಬ್ಬಂದಿ ಸಮರೋಪಾದಿಯಲ್ಲಿ ನಿರತವಾಗಿದ್ದಾರೆ. ಅಧಿಕಾರಿಗಳು ಕೇವಲ ಭೇಟಿ ನೀಡಿದರೆ ಸಾಲದು, ತ್ವರಿತವಾಗಿ ನೆರವಿನ ಅಭಯ ನೀಡಬೇಕು. ತಕ್ಷಣ ಕಾಳಜಿ ಕೇಂದ್ರ ಸ್ಥಾಪಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಮುಡಬೂಳ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಗಳು ಭಾಗಶಃ ಕುಸಿದಿವೆ. ಅಲ್ಲದೆ, ದೋರ ನಹಳ್ಳಿ ಗ್ರಾಮದಲ್ಲಿಯೂ ಮುಂದು ವರಿದ ಭಾಗದಂತೆ ಸಮ ಸ್ಯೆಯೂ ಉಳಿದು ಬಿಟ್ಟಿದೆ. ಪಂಚಾ ಯಿತಿ ಸಿಬ್ಬಂದಿ ಕೇವಲ ಭೇಟಿ ನೀಡಿ ಹೋಗಿದ್ದಾರೆ. ಆದರೆ, ತಗ್ಗು ಪ್ರದೇಶ ದಲ್ಲಿ ನಿಂತ ನೀರು ಬೇರಡೆ ಹರಿದು ಹೋಗುವಂತೆ ಮಾಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಸ್ಥಳೀಯರು ದೂರಿದರು.

‘ತಾಲ್ಲೂಕಿನ ಮುಡಬೂಳ, ಮದ್ರಿಕಿ, ಅಣಬಿ, ಶಿರವಾಳ, ಮಡ್ನಾಳ ಮುಂತಾದ ಕಪ್ಪು ಮಿಶ್ರಿತ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಬೆಳೆಗೆ ಕುತ್ತು ಬಂದಿದೆ. ನೀರಾವರಿ ಪ್ರದೇಶ ಆಗಿದ್ದರಿಂದ ಹೆಚ್ಚು ನೀರು ಬಳಕೆಯಿಂದ ಈಗಾಗಲೇ ಜಮೀನು ಸವಳು ಆಗಿದ್ದು. ಈಗ ಹೆಚ್ಚಿನ ಮಳೆ ಆಗಿದ್ದರಿಂದ ಬೆಳೆದು ಹತ್ತಿ ಕೊಳೆಯುವ ಭೀತಿ ಎದುರಾಗಿದೆ’ ಎನ್ನುತ್ತಾರೆ ರೈತ ಮುಖಂಡ ಅಶೋಕರಾವ ಮಲ್ಲಾಬಾದಿ.

*

ಎರಡು ದಿನದಿಂದ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿನ 40 ಮನೆಗಳಿಗೆ ನೀರು ನುಗ್ಗಿವೆ. ಬೆಳೆ ಹಾನಿಯಾದ ಬಗ್ಗೆ ರೈತರು ಮಾಹಿತಿ ನೀಡಿದ್ದು, ಯಾವುದೇ ಜೀವ ಹಾನಿ ಆಗಿಲ್ಲ.
–ಮಧುರಾಜ ಕೂಡ್ಲಗಿ,ತಹಶೀಲ್ದಾರ್

*

ಅಕಾಲಿಕವಾಗಿ ಸುರಿದ ಮಳೆಯಿಂದ ಬೆಳೆ ಹಾನಿ ಆಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಬದುಕು ಅತಂತ್ರ ಸ್ಥಿತಿಯಲ್ಲಿದೆ. ತ್ವರಿತರವಾಗಿ ಸರ್ಕಾರ ಪರಿಹಾರ ಧನ ನೀಡಬೇಕು.
–ಖಾಜಾ ಮೈನುದ್ದೀನ ಜಮಶೇರಿ ನಾಯ್ಕಲ್, ಗ್ರಾ.ಪಂ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.