ADVERTISEMENT

ಮಳೆಯಿಂದ 1,526 ಹೆಕ್ಟೇರ್‌ ಬೆಳೆ ನಾಶ

ಏ.7ರಂದು ಸುರಿದಿದ್ದ ಮಳೆಯಿಂದ ರೈತ ಕಂಗಾಲು; ಜಂಟಿ ವರದಿ ಸಲ್ಲಿಕೆ

ಬಿ.ಜಿ.ಪ್ರವೀಣಕುಮಾರ
Published 15 ಏಪ್ರಿಲ್ 2020, 15:41 IST
Last Updated 15 ಏಪ್ರಿಲ್ 2020, 15:41 IST
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಭೇಟಿ ನೀಡಿದ್ದರು
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಭೇಟಿ ನೀಡಿದ್ದರು   

ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್ 7ರಂದು ಸುರಿದ ಮಳೆಯಿಂದ ಸಂಭವಿಸಿದ ಬೆಳೆ ಹಾನಿಯ ಜಂಟಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ನಿರ್ದೇಶನದಂತೆ ಸಮೀಕ್ಷೆ ಮಾಡಿದ್ದು, 1,526 ಹೆಕ್ಟೇರ್‌ ಬೆಳೆ ನಾಶವಾಗಿದೆ.

ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿ ಸಮೀಕ್ಷೆ ಮಾಡಿದ್ದಾರೆ.

ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಬೇಸಿಗೆ ಹಂಗಾಮಿನ ಭತ್ತ ಹಾಗೂ ಇತರ ಬೆಳೆಗಳಿಗೆ ಹಾನಿ ಆಗಿದೆ. ಮಳೆ, ಗಾಳಿಯಿಂದಾಗಿ ಭತ್ತದ ಬೆಳೆ ನೆಲಕಚ್ಚಿ ಅಪಾರ ನಷ್ಟ ಉಂಟಾಗಿದೆ.

ADVERTISEMENT

ನಾರಾಯಣಪುರ ಜಲಾಶಯದಿಂದ ನೀರು ಲಭಿಸಿದ್ದರಿಂದ ಹೆಚ್ಚಿನ ರೈತರು ಭತ್ತ ನಾಟಿ ಮಾಡಿದ್ದರು. ಕೆಲವು ಕಡೆ ಕಟಾವು ಆರಂಭವಾಗಿದೆ. ಆದರೆ, ಗಾಳಿ, ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹೆಚ್ಚು ಹಾನಿ: ವಡಗೇರಾ, ಹುಣಸಗಿ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. ಕಾಲುವೆ ಕೊನೆ ಭಾಗದ ರೈತರು ಹೇಗೋಕಷ್ಟಪಟ್ಟು ಭತ್ತ ಬೆಳೆದಿದ್ದರು. ಆದರೆ, ಆಕಾಲಿಕ ಆಲಿಕಲ್ಲು ಮಳೆ ಬಂದು ರೈತರಿಗೆ ಸಮಸ್ಯೆ ತಂದೊಂಡಿದೆ.

ಎಲ್ಲೆಲ್ಲಿ ಹಾನಿ: ಯಾದಗಿರಿ ತಾಲ್ಲೂಕಿನ ಬಳಿಚಕ್ರ ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದೆ. ವಡಗೇರಾ ತಾಲ್ಲೂಕಿನ ತುಮಕೂರು, ಕೊಂಕಲ್‌, ರೋಟ್ನಡಗಿ, ಅನಕಸೂರು, ಐಕೂರ, ನಾಯ್ಕಲ್‌, ಬಬಲಾದ, ಮರಕಮಕಲ್‌, ಹುಣಸಗಿ ತಾಲ್ಲೂಕಿನ ಹುಣಸಗಿ, ಮಾಳನೂರ, ಗುಳಬಾಳ, ದ್ಯಾಮನಾಳ, ಗೆದ್ದಲಮರಿ, ಬೊಮ್ಮಗುಡ್ಡ, ಕುಪ್ಪಿ, ಚೆನೂರ, ಕಾಮನಟಗಿ, ಕಡದರಾಳ, ಬೈಲಕುಂಟ, ರಾಜನಕೊಳೂರ, ಜುಮಾಲಪುರ, ಕಲ್ಲದೇವನಹಳ್ಳಿ, ದೇವಾಪುರ (ಜೆ), ಬನ್ನಟ್ಟಿ ಇನ್ನಿತರ ಕಡೆ ಹೆಚ್ಚು ಹಾನಿಯಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಕ್ಯಾತನಾಳ ಗ್ರಾಮದಲ್ಲಿ 5.28 ಹೆಕ್ಟೇರ್‌ ಪ್ರದೇಶದಲ್ಲಿ ಸಜ್ಜೆ ಬೆಳೆ ಹಾಳಾಗಿದೆ.

ಬೆಳೆ ವಿಮೆ ಮಾಡಿಸಿಲ್ಲ: ಬಹಳಷ್ಟು ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ, ಬೇಸಿಗೆ ಹಂಗಾಮಿನಲ್ಲಿ ವಿಮೆ ಮಾಡಿಸಿಲ್ಲ. ಇದರಿಂದ ಹಲವಾರು ರೈತರಿಗೆ ನಷ್ಟ ಉಂಟಾಗಿದೆ. ಎಕರೆಗೆ ₹600 ಬೆಳೆ ವಿಮೆ ಮಾಡಿಸಬೇಕು. ರೈತರು ಇದರಿಂದ ವಂಚಿತರಾಗಿದ್ದಾರೆ. ಒಂದು ಹೆಕ್ಟೇರ್‌ಗೆ ₹86 ಸಾವಿರ ಪರಿಹಾರ ನೀಡಬಹುದು. ಅದೂ ಶೇಕಡ 30ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ.

ರೈತ ಕಂಗಾಲು: ಭತ್ತದ ಬೆಳೆ ನೆಲ ಕಚ್ಚಿರುವುದರಿಂದ ಕಟಾವಿಗೆ ಸಮಸ್ಯೆ ಆಗಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹಗಲಿರುಳು ಕಷ್ಟಪಡುತ್ತಿದ್ದಾರೆ.

ಜಂಟಿ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಎನ್‌ಡಿಆರ್‌ಎಫ್ ಮಾನದಂಡದಂತೆ ರೈತರಿಗೆ ಹೆಕ್ಟೇರ್‌ಗೆ ₹13,500 ಸಿಗಲಿದೆ ಎಂದುಜಂಟಿ ಕೃಷಿ ನಿರ್ದೇಶಕಿದೇವಿಕಾ ಆರ್ತಿಳಿಸಿದರು.

ಸರ್ಕಾರ ಶೀಘ್ರವೇ ರೈತರಿಗೆ ಪರಿಹಾರ ಧನ ವಿತರಿಸಬೇಕು. ಲಾಕ್‌ಡೌನ್‌ನಿಂದ ರೈತರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದುಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.