ADVERTISEMENT

ಯಾದಗಿರಿ: ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ಅರ್ಧಗಂಟೆ ಮಳೆಗೆ ಉರುಳಿ ಬಿದ್ದ ಮರಗಳು, ಟಿನ್‌ ಪತ್ರಾಸ್‌ಗಳು

​ಪ್ರಜಾವಾಣಿ ವಾರ್ತೆ
Published 23 ಮೇ 2024, 16:20 IST
Last Updated 23 ಮೇ 2024, 16:20 IST
ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ರಸ್ತೆಯಲ್ಲಿ ಸುರಿದ ಮಳೆಯಲ್ಲೇ ಮಗುವಿನ ಜೊತೆ ಮಹಿಳೆ ತೆರಳಿದರು
ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ರಸ್ತೆಯಲ್ಲಿ ಸುರಿದ ಮಳೆಯಲ್ಲೇ ಮಗುವಿನ ಜೊತೆ ಮಹಿಳೆ ತೆರಳಿದರು   

ಯಾದಗಿರಿ: ನಗರದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಯಿತು. ಕಳೆದ ಎರಡ್ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯಿತು.

ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಬಿರುಗಾಳಿಗೆ ಹಲವಾರು ಮನೆಗಳ ಪತ್ರಾಸ್‌ಗಳು ಹಾರಿ ಹೋಗಿವೆ. ಮನೆ ಅಕ್ಕಪಕ್ಕದಲ್ಲಿದ್ದ ಬೇವಿನ ಮರಗಳು ಕಾಂಪೌಂಡ್‌ ಮೇಲೆ ಉರುಳಿ ಬಿದ್ದಿವೆ. ಇವುಗಳನ್ನು ತೆರವುಗೊಳಿಸಲು ಹರಸಾಹಸ ಪಡುವಂತೆ ಆಯಿತು.

ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಲೋಕೋಪಯೋಗಿ ಕಚೇರಿ ಆವರಣದಲ್ಲಿ ನೀರು ನಿಂತಿತು. ಅದರ ಪಕ್ಕದಲ್ಲಿರುವ ಪಂಚರ್‌ ಅಂಗಡಿ ಮೇಲೆ ಬೇವಿನ ಮರದ ಕೊಂಬೆ ಉರುಳಿದೆ. ಶಿವನಗರದಲ್ಲಿ ಬೇವಿನ ಮರಗಳು ಉರುಳಿಬಿದ್ದು, ಸಂಚಾರಕ್ಕೆ ಪರದಾಡಬೇಕಾಯಿತು. ಗಂಗಾ ನಗರದಲ್ಲಿ ಟಿನ್‌ ಶೆಡ್‌ ಪತ್ರಾಸ್‌ ಹಾರಿದೆ. 

ADVERTISEMENT

ನಗರದ ಅಂಬೇಡ್ಕರ್ ವೃತ್ತದಿಂದ ಕೋರ್ಟ್ ಕಡೆ ತೆರಳುವ ಲುಂಬಿನಿ ಕೆರೆ ದಡೆಯ ಮೇಲೆ ಮರಗಳ ಬಿದ್ದು ಸಂಚಾರ ಅಸ್ತವ್ಯಸ್ತವಾಯಿತು. ಬಿರುಗಾಳಿಗೆ ಜಿಲ್ಲಾ ಗ್ರಂಥಾಲಯದ ಕಿಟಕಿಯ ಗಾಜು ಪುಡಿಯಾಗಿದೆ. ವಿದ್ಯುತ್ ತಂತಿ ಕಡಿತವಾಗಿದ್ದು, ಮರದ ರೆಂಬೆಗಳು ಧರೆಗೆ ಉರುಳಿವೆ. ವಿದ್ಯಾಮಂಗಲ ಕಾರ್ಯಾಲಯ ಹಿಂಭಾಗದಲ್ಲಿ ಬೃಹತ್‌ ಬೇವಿನ ಮರ ನೆಲಕ್ಕೆ ಬಿದ್ದು ಸಂಚಾರದಲ್ಲಿ ಆಡಚಣೆ ಉಂಟಾಯಿತು. ಎಲ್‌ಐಸಿ ಕಚೇರಿ ಸಮೀಪದ ಮನೆ ಮೇಲೆ ಬೃಹತ್‌ ಮರ ಬಿದ್ದಿತ್ತು.

ರಸ್ತೆ ಮೇಲೆ ಹರಿದಾಡಿದ ನೀರು: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಳೆಯಿಂದ ರಸ್ತೆ ಮೇಲೆ ನೀರು ಹರಿದಾಡಿತು. ಅಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು.

ರೈತರ ಹರ್ಷ: ಮುಂಗಾರು ಮಳೆ ಆಶಾದಾಯಕವಾಗಿದ್ದು, ರೈತರಲ್ಲಿ ಹರ್ಷ ಉಂಟು ಮಾಡಿದೆ. ಗುರುವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಬಿಸಿಲಿನ ವಾತಾವರಣ ಇದ್ದು, ಸಂಜೆ ವೇಳೆಗೆ ಮೋಡ ಕವಿದ ಬಿರುಗಾಳಿ ಮಳೆ ಸುರಿಯಿತು. ಇದರಿಂದ ಜಮೀನು ಹದ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

‘ನಗರದ ಜನತೆ ಸಹಕರಿಸಿ’

ನಗರದಲ್ಲಿ ಗುರುವಾರ ಸುರಿದ ಬಿರುಗಾಳಿ ಮಳೆಗೆ ಮರದ ಕೊಂಬೆಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದು ವಿದ್ಯುತ್‌ ಕಡಿತವಾಗಿದೆ. ವಿದ್ಯುತ್‌ ಕಡಿತವಾಗಿದ್ದ ಕಾರಣ ನೀರು ಪೂರೈಕೆಯಲ್ಲೂ ವ್ಯತ್ಯಸವಾಗಲಿದೆ. ಹೀಗಾಗಿ ನಗರದ ಜತೆಗೆ ಸಹಕರಿಸಬೇಕು ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಹೇಳಿದ್ದಾರೆ. ಎರಡು ಜೆಸಿಬಿ ಮೂಲಕ ಮರಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಜತೆಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ವಿದ್ಯುತ್ ಸಮಸ್ಯೆ ನಿವಾರಣೆಯಾದ ನಂತರ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಯಾದಗಿರಿಯ ತರಕಾರಿ ಮಾರುಕಟ್ಟೆಯಲ್ಲಿ ಮಳೆ ನೀರು ಜಲಾವೃತ್ತವಾಗಿತ್ತು
ಯಾದಗಿರಿಯ ಲೋಕೋಪಯೋಗಿ ಇಲಾಖೆ ಮಳೆ ನೀರಿನಿಂದ ಜಲಾವೃತ್ತವಾಗಿತ್ತು
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯ ಹಿಂಭಾಗದಲ್ಲಿ ಬೃಹತ್‌ ಬೇವಿನ ಮರ ನೆಲಕ್ಕೆ ಬಿದ್ದು ಸಂಚಾರ ಆಡೆಚಣೆಯಾಯಿತು
ಯಾದಗಿರಿಯ ಎಲ್‌ಐಸಿ ಕಚೇರಿ ಸಮೀಪದ ಮನೆ ಮೇಲೆ ಬೃಹತ್‌ ಮರ ಬಿದ್ದಿರುವುದು
ಯಾದಗಿರಿಯ ಹತ್ತಿಕುಣಿ ರಸ್ತೆಯಲ್ಲಿ ಬರುವ ಮಾರುಕಟ್ಟೆ ನೀರಿನಿಂದ ಜಲಾವೃತ್ತಗೊಂಡಿರುವುದು
ಮಳೆಯಲ್ಲಿ ಬಿದ್ದ ಆಲಿಕಲ್ಲನ್ನು ವಿದ್ಯಾರ್ಥಿನಿ ವಸುಧಾ ಕೈಯಲ್ಲಿ ಹಿಡಿದು ತೋರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.