ADVERTISEMENT

ರಾಖಿ ಕಟ್ಟಿ ಶುಭಾಶಯ ವಿನಿಮಯ; ಭ್ರಾತೃತ್ವ ಬಂಧನದ ರಾಖಿ ಹಬ್ಬ ಆಚರಣೆ

ಸಹಿ ತಿನಿಸಿದ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:43 IST
Last Updated 10 ಆಗಸ್ಟ್ 2025, 2:43 IST
ಯಾದಗಿರಿಯ ಕೊಲ್ಲೂರು ಮಲ್ಲಪ್ಪ ಪಿಯು ಕಾಲೇಜಿನಲ್ಲಿ ಶನಿವಾರ ರಕ್ಷಾ ಬಂಧನ ಆಚರಿಸಲಾಯಿತು
ಯಾದಗಿರಿಯ ಕೊಲ್ಲೂರು ಮಲ್ಲಪ್ಪ ಪಿಯು ಕಾಲೇಜಿನಲ್ಲಿ ಶನಿವಾರ ರಕ್ಷಾ ಬಂಧನ ಆಚರಿಸಲಾಯಿತು   

ಯಾದಗಿರಿ: ಸಹೋದರ–ಸಹೋದರಿಯರ ಪ್ರೀತಿಯ ದ್ಯೋತಕವಾದ ‘ರಕ್ಷಾ ಬಂಧನ’ ಹಬ್ಬವನ್ನು ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶ್ರಾವಣ ಮಾಸದ ಹುಣ್ಣಿಮೆಯಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿದರು.

ದಾರ, ಬಳೆ, ಶ್ರೀಕೃಷ್ಣ, ಸ್ವಸ್ತಿಕ್, ಗಣೇಶ, ಕುಂದನ್ ಗೊಂಡೆ, ಓಂ ಸೇರಿದಂತೆ ಹಲವು ಮಾದರಿಯ ರಾಖಿಗಳನ್ನು ತಂದಿದ್ದ ಗೃಹಿಣಿಯರು, ಸಹೋದರಿಯರು ತಮ್ಮ ಸಹೋದರರಿಗೆ ಅವುಗಳನ್ನು ಕಟ್ಟಿ, ಸಹಿ ತಿನಿಸಿ ಶುಭ ಹಾರೈಸಿದರು.

ನಗರದ ಧಾರ್ಮಿಕ ಕೇಂದ್ರಗಳು, ಸಂಘ–ಸಂಸ್ಥೆಗಳು, ಶಾಲಾ– ಕಾಲೇಜು, ಕಚೇರಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು.

ADVERTISEMENT

ಬಂಧನದ ಮಹತ್ವ ಸಾರುವ ರಾಖಿ: ‘ಅಣ್ಣ- ತಂಗಿಯರ ನಡುವಿನ ಬಂಧನದ ಮಹತ್ವವನ್ನು ರಕ್ಷಾ ಬಂಧನ ಹಬ್ಬ ತಿಳಿಸುತ್ತದೆ. ಇಡೀ ವಿಶ್ವ ಒಂದು ಬೃಹತ್ ಕುಟುಂಬ ಹಾಗೂ ವಿಶ್ವಕ್ಕೆ ಒಬ್ಬನೇ ದೇವ, ನಾವೆಲ್ಲರೂ ಅವನ ಮಕ್ಕಳು ಎಂಬ ಸಿದ್ಧಾಂತಕ್ಕೆ ವಿಶ್ವದ ಎಲ್ಲಾ ಧರ್ಮಗಳಿಗೆ ಮನ್ನಣೆ ಇದೆ’ ಎಂದು ದಾಸಬಾಳಾದೀಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.

ದಾಸಬಾಳಾದೀಶ್ವರ ಮಠದಲ್ಲಿ ನೂಲಹುಣ್ಣಿಮೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಖಿ ಹಬ್ಬ ಧರ್ಮ, ಭಾಷೆ, ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಎಲ್ಲೆಡೆ ತಮ್ಮದೇ ರೀತಿಯಲ್ಲಿ ಆಚರಿಸುವುದನ್ನು ಕಾಣುತ್ತೇವೆ’ ಎಂದರು.

ಮಠದ ಭಕ್ತರಾದ ಮಲ್ಲಣ್ಣ ಶಿರವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾನಾ ಕಡೆಯಿಂದ ಬಂದ ಭಕ್ತರು ಸ್ವಾಮೀಜಿಯ ಆಶೀರ್ವಾದ ಪಡೆದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ: ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರು ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಕೆಲ ಯುವಕರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ಬಿಜೆಪಿ ಕಚೇರಿಯಲ್ಲಿ ಸಹ ಆಚರಣೆ ಮಾಡಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚವ್ಹಾಣ್ ಮಾತನಾಡಿ, ‘ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಸಹೋದರರ ಆರೋಗ್ಯ, ಆಯಸ್ಸು ಚೆನ್ನಾಗಿ ಇರಲೆಂದು ಸಹೋದರಿಯರು ಪ್ರಾರ್ಥಿಸುತ್ತಾರೆ’ ಎಂದರು.

ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ, ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ, ಕಾರ್ಯದರ್ಶಿ ಶಕುಂತಲಾ ಗುಜನೂರು, ಉಪಾಧ್ಯಕ್ಷೆ ಮಂಜುಳಾ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿಯ ದಾಸಬಾಳಾದೀಶ್ವರ ಮಠದಲ್ಲಿ ಶನಿವಾರ ವೀರೇಶ್ವರ ಸ್ವಾಮೀಜಿಗೆ ರಾಖಿ ಕಟ್ಟಿದ ಭಕ್ತರು  

ಕಾಲೇಜಿನಲ್ಲಿ ರಕ್ಷಾ ಬಂಧನ

ನಗರದ ಕೊಲ್ಲೂರು ಮಲ್ಲಪ್ಪ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಿದರು. ಉಪನ್ಯಾಸಕ ಅಣ್ಣಪ್ಪ ಮಾತನಾಡಿ ‘ರಕ್ಷಾ ಬಂಧನ ಭಾರತೀಯ ಪರಂಪರೆಯ ಹಬ್ಬವಾಗಿದೆ.

ಶ್ರೀಕೃಷ್ಣ ಪರಮಾತ್ಮನ ಬೆರಳಿಗೆ ಗಾಯಗೊಂಡಾಗ ಸಹೋದರಿ ದ್ರೌಪದಿ ತನ್ನ ಸೀರೆಯ ಸೆರಗನ್ನು ತುಂಡರಿಸಿ ಗಾಯಗೊಂಡ ಬೆರಳಿಗೆ ಕಟ್ಟಿ ಸಹೋದರ ವಾತ್ಸಲ್ಯವನ್ನು ಮೆರೆದಿದ್ದಳು’ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಮುಂಡರಗಿ ಉಪನ್ಯಾಸಕರಾದ ನಿಂಗಪ್ಪ ಬೆನಕನಹಳ್ಳಿ ಭೀಮರಾಯ ಅನಪುರ ಸಿದ್ದಪ್ಪ ಉಳ್ಳೆಸೂಗೂರು ಆನಂದ್ ಅಜರಾ ಪರಿವೀನ್ ಬೇಗಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸಿ.ಆರ್. ಕಂಬಾರ್ ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಶನಿವಾರ ನಗರ ಠಾಣೆಯ ಪಿಎಸ್‌ಐ ಮಂಜನಗೌಡ ಪಾಟೀಲ ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ರಾಖಿ ಕಟ್ಟಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.