ಸೈದಾಪುರ: ‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕೆ ‘ರಾಂಪ್’ ಯೋಜನೆ ಪ್ರೇರಕ ಶಕ್ತಿಯಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ರವಿಚಂದ್ರ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕಡೇಚೂರು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಒಂದು ದಿನದ ಇನ್‌ಕ್ಯುಬೇಶನ್ ಕಾರ್ಯಾಗಾರ ಮತ್ತು ವ್ಯಾಪಾರ ಮೇಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮಗಳು ಉಳಿದು, ಬೆಳೆಯಲು ಹಾಗೂ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸಿಕೊಳ್ಳಲು ಹೊಸ ತಂತ್ರಜ್ಞಾನ, ಕೌಶಲ ಅತ್ಯಗತ್ಯ. ಜಿಟಿಟಿಸಿ ಕೇಂದ್ರ ತಾಂತ್ರಿಕ ತರಬೇತಿ ಮತ್ತು ಬೆಂಬಲ ನೀಡಲು ಸದಾ ಸಿದ್ಧವಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶಕುಮಾರ ಮಾತನಾಡಿ, ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರಾಂಪ್’ ಯೋಜನೆ ಎಂಎಸ್‌ಎಂಇ ಗಳಿಗೆ ಹೊಸ ಚೈತನ್ಯ ನೀಡಲಿದೆ. ಈ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳು, ಸಾಲ ಮತ್ತು ಮಾರುಕಟ್ಟೆ ಅವಕಾಶಗಳನ್ನು ಜಿಲ್ಲೆಯ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಬಿಸಿನೆಸ್ ಇನ್‌ಕ್ಯುಬೇಶನ್ ವಿಭಾಗದ ಮುಖ್ಯಸ್ಥ ಬಸಂತಿ ಗಂಟಿ ಮಾತನಾಡಿ, ‘ಯಶಸ್ವಿ ಉದ್ಯಮಕ್ಕೆ ಕೇವಲ ಹಣ ಹೂಡಿಕೆಯಷ್ಟೇ ಹೊಸ ಆವಿಷ್ಕಾರ, ಸರಿಯಾದ ಮಾರ್ಗದರ್ಶನ ಮತ್ತು ವ್ಯವಹಾರದ ಜ್ಞಾನವೂ ಮುಖ್ಯ’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ (ಗ್ರಾಮೀಣ) ಮುಕುಂದ್ ರೆಡ್ಡಿ ಪಾಟೀಲ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಸಲೀಂ, ಮಹೇಶ್, ಜಿಟಿಟಿಸಿ ಕೇಂದ್ರದ ವೆಂಕಟರಾವ್, ಪ್ರಿಯಾಂಕಾ, ಪ್ರದೀಪಕುಮಾರ, ಹನುಮಂತ, ಶ್ರೀನಿವಾಸ, ಸುಮ, ಅಕ್ಷಯ, ಅಂಕುಶ, ಹುಸೇನ್, ಬಾಲಾಜಿ, ಸುಕಮುನಿ ಮತ್ತು ಮಂಜುನಾಥ, ತರಬೇತಿ ನಿರತ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.