ADVERTISEMENT

ಯಾದಗಿರಿ | ಪರಿಹಾರ ಬೋಧನೆ: 13 ದಿನಗಳಲ್ಲಿ ಪಠ್ಯ ಬೋಧಿಸುವ ಅನಿವಾರ್ಯತೆ

ಬಿ.ಜಿ.ಪ್ರವೀಣಕುಮಾರ
Published 13 ಏಪ್ರಿಲ್ 2025, 6:16 IST
Last Updated 13 ಏಪ್ರಿಲ್ 2025, 6:16 IST
ಯಾದಗಿರಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಇತಿಹಾಸ ಪಠ್ಯ ಬೋಧನೆ ಮಾಡಲಾಯಿತು
ಯಾದಗಿರಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಇತಿಹಾಸ ಪಠ್ಯ ಬೋಧನೆ ಮಾಡಲಾಯಿತು   

ಯಾದಗಿರಿ: ಇತ್ತೀಚೆಗೆ ದ್ವಿತೀಯ ಪಿಯು ಪರೀಕ್ಷೆ–1ರ ಫಲಿತಾಂಶ ಪ್ರಕಟಗೊಂಡಿದ್ದು, ಅನ್ನುತ್ತಿರ್ಣರಾದವರಿಗೆ ಏ.11 ರಿಂದ 23 ರವರೆಗೆ ರಾಜ್ಯ ಸರ್ಕಾರ ಪರಿಹಾರ ಬೋಧನೆಯ ತರಗತಿ ಆಯೋಜಿಸಿದೆ. ಆದರೆ, 13 ದಿನಗಳಲ್ಲೇ ಪಠ್ಯ ಬೋಧಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಡ್ಡಾಯವಾಗಿ ಉಪನ್ಯಾಸಕರು ಬೋಧನೆಯನ್ನು ಮಾಡಿ ದ್ವಿತೀಯ ಹಂತದ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶ ಮಾಡಿದೆ.

ಶುಕ್ರವಾರದಿಂದ ಆರಂಭವಾದ ಪರಿಹಾರ ಬೋಧನೆಯ ತರಗತಿಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಬೆರಳೆಣಿಕೆಯಲ್ಲಿ ಹಾಜರಾಗುತ್ತಿದ್ದಾರೆ. ಹಾಜರಾತಿ ಇಲ್ಲದ ಕಾರಣ ಉಪನ್ಯಾಸಕರು ಪಾಲಕರ ಮೊಬೈಲ್‌ಗೆ ಕರೆ ಮಾಡಿದರೆ ‘ನಮ್ಮ ಮಗ ಊರಲ್ಲಿ ಇಲ್ಲ ಆತ ಬಂದ ನಂತರ ಕಾಲೇಜಿಗೆ ಕಳುಹಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ಇದರಿಂದ ಉಪನ್ಯಾಸಕರ ಮೇಲೆ ಭಾರ ಬಿದ್ದಂತೆ ಆಗಿದೆ.

ADVERTISEMENT

ನಿರ್ದಿಷ್ಟ ಪಠ್ಯಕ್ರಮವಿಲ್ಲ: 

ಎರಡನೇಯ ಹಂತದ ಪರೀಕ್ಷೆಗೆ ಕೇವಲ 13 ದಿನಗಳು ಪರಿಹಾರ ಬೋಧನೆ ಮಾಡಬೇಕು ಎನ್ನುವ ಆದೇಶವಿದ್ದು, ಒಂದು ವರ್ಷವಿಡೀ ಬೋಧನೆ ಮಾಡಿದ ವಿಷಯವನ್ನು ಕೇವಲ 13 ದಿನಗಳಲ್ಲಿ ಪೂರ್ಣಗೊಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರಿಕ ಶಾಸ್ತ್ರ ಹಾಗೂ ಭಾಷಾ ವಿಷಯಗಳು ಇಡೀ ವರ್ಷ ಬೋಧನೆ ಮಾಡಿದರೆ ಪಠ್ಯಕ್ರಮ ಸಕಾಲದಲ್ಲಿ ಮುಗಿಸಲು ಉಪನ್ಯಾಸಕರು ಹರಸಾಹಸ ಪಡಬೇಕಾಗುತ್ತದೆ.

‘ಪರೀಕ್ಷೆ–2 ವಿದ್ಯಾರ್ಥಿಗಳ ಅನುಕೂಲಕ್ಕೆ ಪರಿಹಾರ ಬೋಧನೆ ಹಮ್ಮಿಕೊಳ್ಳಲಾಗಿದೆ. ಆದರೆ, ಶೈಕ್ಷಣಿಕ ವರ್ಷದಲ್ಲೇ ಕಲಿಯದ ವಿದ್ಯಾರ್ಥಿಗಳು ಈ 13 ದಿನಗಳಲ್ಲಿ ಏನು ಕಲಿಯುತ್ತಾರೆ ಎನ್ನುವಂತಾಗಿದೆ’ ಎನ್ನುತ್ತಾರೆ ಉಪನ್ಯಾಸಕರೊಬ್ಬರು.

ನಿರ್ದಿಷ್ಟವಾದ ಘಟಕಗಳನ್ನು ಪರೀಕ್ಷೆಗಾಗಿ ಬೋಧನೆ ಮಾಡಲು ಶಿಕ್ಷಣ ಇಲಾಖೆ ಹೇಳಿಲ್ಲ. ಹಾಗೆಯೇ ಮಾದರಿಯ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಗೊಂದಲದಲ್ಲಿ ಇದ್ದಾರೆ.

ಯಾದಗಿರಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಗಣಿತ ಪಠ್ಯ ಬೋಧಿಸಲಾಯಿತು
ಜಿಲ್ಲೆಯಲ್ಲಿ ಅನ್ನುತ್ತೀರ್ಣದವರಿಗೆ ಪರಿಹಾರ ಬೋಧನೆ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತದ ಪರೀಕ್ಷೆ ಏಪ್ರಿಲ್ 24ರಿಂದ ಮೇ 8ರವರೆಗೆ ನಡೆಯಲಿದೆ
ಸಿ.ಕೆ.ಕುಳಗೇರಿ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯು ಎರಡನೇ ಹಂತದ ಪರೀಕ್ಷೆಗಾಗಿ ಪರಿಹಾರ ಬೋಧನೆ ಆಯೋಜಿಸಿರುವುದು ಉತ್ತಮವಾಗಿದೆ. ಆದರೆ ಕೇವಲ 13 ದಿನಗಳಲ್ಲಿ ಸಂಪೂರ್ಣವಾಗಿ ಪಠ್ಯಕ್ರಮ ಮುಗಿಸಲು ಸಾಧ್ಯವಿಲ್ಲ
ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕ
9 ಪರೀಕ್ಷಾ ಕೇಂದ್ರಗಳು
ಜಿಲ್ಲೆಯಲ್ಲಿ ಪರೀಕ್ಷೆ–2ಕ್ಕೆ 9 ಪರೀಕ್ಷಾ ಕೇಂದ್ರಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ 3 ಶಹಾಪುರ ಸುರಪುರದಲ್ಲಿ ತಲಾ 2 ಗುರುಮಠಕಲ್‌ ಮತ್ತು ಹುಣಸಗಿಯಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ–2 ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.