ADVERTISEMENT

ಸಂಪುಟದಲ್ಲಿ ‘ಯಾದಗಿರಿ ಜಿಲ್ಲೆ’ಗೆ ಸಿಗದ ಪ್ರಾತಿನಿಧ್ಯ

ಇಬ್ಬರು ಮುಖ್ಯಮಂತ್ರಿಗಳ ಸಂಪುಟದಲ್ಲೂ ಜಿಲ್ಲೆಯ ಬಿಜೆಪಿ ಶಾಸಕರಿಗೆ ದಕ್ಕದ ಸಚಿವ ಸ್ಥಾನ

ಬಿ.ಜಿ.ಪ್ರವೀಣಕುಮಾರ
Published 5 ಆಗಸ್ಟ್ 2021, 0:53 IST
Last Updated 5 ಆಗಸ್ಟ್ 2021, 0:53 IST
ವೆಂಕಟರೆಡ್ಡಿ ಗೌಡ ಮುದ್ನಾಳ, ಯಾದಗಿರಿ ಶಾಸಕರು
ವೆಂಕಟರೆಡ್ಡಿ ಗೌಡ ಮುದ್ನಾಳ, ಯಾದಗಿರಿ ಶಾಸಕರು   

ಯಾದಗಿರಿ: ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಇದರಿಂದ ಜಿಲ್ಲೆಯಲ್ಲಿ ಬೆಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿದ್ದು, ಎರಡು ಬಿಜೆಪಿ, ತಲಾ ಒಂದು ಕಡೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿದ್ದಾರೆ.

ಯಾದಗಿರಿಯಲ್ಲಿ ವೆಂಕಟರಡ್ಡಿ ಮುದ್ನಾಳ, ಸುರಪುರ ಕ್ಷೇತ್ರದಲ್ಲಿ ನರಸಿಂಹ ನಾಯಕ (ರಾಜೂಗೌಡ) ಬಿಜೆಪಿ ಶಾಸಕರಿದ್ದು, ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗುತ್ತಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಯಾರಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ.

ADVERTISEMENT

ಮೂರು ಬಾರಿ ಆಯ್ಕೆ: ಸುರಪುರ ಶಾಸಕ ರಾಜೂಗೌಡ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಕರ್ನಾಟಕ ವಿಧಾನಸಭೆಗೆ ಪ್ರಥಮ ಬಾರಿಗೆ ‘ಕನ್ನಡ ನಾಡು’ ಪಕ್ಷದಿಂದ ಸುರಪುರ ಮತ ಕ್ಷೇತ್ರದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದರು. ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಜಗದೀಶ ಶೆಟ್ಟರ್‌ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೂ ಸಚಿವ ಸ್ಥಾನಕ್ಕೆ ಇವರನ್ನು ಪರಿಗಣಿಸಿಲ್ಲ.

ಪ್ರಥಮ ಬಾರಿಗೆ ಆಯ್ಕೆ: ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು. ಅಲ್ಲದೇ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರನ್ನು ಪರಿಗಣಿಸಲಾಗುತ್ತದೆ ಎನ್ನಲಾಗಿತ್ತು.

ಬೆಂಗಳೂರಿಗೆ ಬೆಂಬಲಿಗರ ದಂಡು: ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕಳೆದ ಒಂದು ವಾರದಿಂದ ಯಾದಗಿರಿ, ಸುರಪುರದ ಬೆಂಬಲಿಗರು ಬೆಂಗಳೂರಿನಲ್ಲಿ ಬೀಡು ಬಿಟ್ಟು ಮುಖಂಡನ್ನು ಭೇಟಿ ಮಾಡಿದ್ದರು.

ತಮ್ಮ ಭಾಗದ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದರು.

ಕೊನೆ ಗಳಿಕೆಯಲ್ಲಿ ತಪ್ಪಿದ ಸ್ಥಾನ: ಯಾದಗಿರಿ ವೆಂಕಟರಡ್ಡಿ ಮುದ್ನಾಳ ಮೊದಲ ಬಾರಿಗೆ ಆಯ್ಕೆಯಾಗಿದ್ದರಿಂದ ಹೆಚ್ಚಿನ ಒತ್ತಡವನ್ನು ಸ್ವಃತ ಶಾಸಕರೇ ಹೇರಿರಲಿಲ್ಲ. ಆದರೆ, ಸುರಪುರ ಶಾಸಕ ರಾಜೂಗೌಡ ತಮ್ಮ ಆಯ್ಕೆ ಪರಿಗಣಿಸುವಂತೆ ಹಲವರ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೇ ಅವರ ಆಯ್ಕೆ ಶೇ 100ರಷ್ಟು ಖಚಿತ ಎನ್ನುವಂತೆ ಬಿಂಬಿಸಲಾಗಿತ್ತು. ಕೊನೆ ಗಳಿಗೆಯಲ್ಲಿ ಸ್ಥಾನ ಇಲ್ಲ. ಮುಂದೆ ನೀಡಲಾಗುತ್ತದೆ ಎಂದು ಸೂಚನೆ ಬಂದಿದ್ದರಿಂದ ಅಭಿಮಾನಿಗಳಲ್ಲಿ ಆಕ್ರೋಶ ಮಡುಗಟ್ಟಿತ್ತು. ಕೂಡಲೇ ಜಮಾಯಿಸಿದ ಕಾರ್ಯಕರ್ತರು, ಅಭಿಮಾನಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಸಮಾಧಾನ: ಇಬ್ಬರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಗದ ಕಾರಣ ಜಿಲ್ಲೆಯಲ್ಲಿ ಅಸಮಾಧಾನ ಉಂಟಾಗಿದೆ. ಹಲವಾರು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ವಾಲ್ಮೀಕಿ ಸಮುದಾಯದ ಯುವಕರು ಪ್ರತಿಭಟನೆ ಮಾಡಿ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

‘ಕಾಂಗ್ರೆಸ್‌ ಸರ್ಕಾರದಲ್ಲಿ ಈ ಭಾಗದ ಶಾಸಕರು ಸಚಿವ ಸ್ಥಾನ ಪಕ್ಕಾ ಇರುತ್ತಿತ್ತು. ಈಗ ಬಿಜೆಪಿ ಸರ್ಕಾರದಲ್ಲಿ ಈ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಒಂದು ಕಾಲದಲ್ಲಿ ಬಾಬುರಾವ ಚಿಂಚನಸೂರ ಅವರು ಸಪ್ತ ಖಾತೆಗಳನ್ನು ನಿಭಾಯಿಸಿದ್ದರು. ಆದರೆ, ಕಲಬುರ್ಗಿಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸ್ಥಾನ ಸಿಕ್ಕಿಲ್ಲ. ಈ ಭಾಗವನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಕಾಂಗ್ರೆಸ್‌ನ ಡಾ.ಭೀಮಣ್ಣ ಆರೋಪಿಸುತ್ತಾರೆ.

***

ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಒಬ್ಬರಿಗಾದರೂ ಸಚಿವ ಸ್ಥಾನ ಕೊಡಬೇಕಾಗಿತ್ತು. ಆದರೆ, ಜಿಲ್ಲೆಗೆ ಮಂತ್ರಿಗಿರಿ ಸಿಕ್ಕಿಲ್ಲ
ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ

***

ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿಯಿಂದ ತೀವ್ರ ಅನ್ಯಾಯವಾಗಿದೆ. ಆದರಲ್ಲೂ ಹಿಂದುಳಿದ ಯಾದಗಿರಿ ಜಿಲ್ಲೆಗೆ ಸಚಿವ ಸ್ಥಾನ ಅಗತ್ಯವಿತ್ತು

ಡಾ.ಭೀಮಣ್ಣ ಮೇಟಿ, ಕಾಂಗ್ರೆಸ್‌ ಮುಖಂಡ

***

ವಾಲ್ಮೀಕಿ ಸಮುದಾಯದವರಿಗೆ ಅನ್ಯಾಯವಾಗಿದೆ. ಜಿಲ್ಲೆ ಕಡೆಗಣಿಸಲಾಗಿದೆ. ಮುಂದೆ ತಕ್ಕ ಪಾಠ ಕಲಿಸಲಾಗುತ್ತದೆ
ಹನುಮೇಗೌಡ ಬಿರನಕಲ್‌, ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ

***

ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಅಪಾದನೆ ಇದ್ದಂತವರಿಗೆ ಸ್ಥಾನ ನೀಡಲಾಗಿದೆ.
ಚನ್ನಾರೆಡ್ಡಿ ಪಾಟೀಲ ತುನ್ನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ

***

ಅಳೆದು ತೂಗಿ ಸಚಿವ ಸ್ಥಾನ ನೀಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ
ಚಂದ್ರಶೇಖರಗೌಡ ಮಾಗನೂರ, ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.