ADVERTISEMENT

ಹೆಚ್ಚವರಿ ವೇತನ, ಬಡ್ತಿ ಮಂಜೂರಿಗೆ ಆಗ್ರಹ

ವಿವಿಧ ಬೇಡಿಕೆ ಈಡೇರಿಸುವಂತೆ ಪಿಯು ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:18 IST
Last Updated 28 ನವೆಂಬರ್ 2019, 15:18 IST
ಪದವಿ ಪೂರ್ವ ಉಪನ್ಯಾಸಕರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪದವಿ ಪೂರ್ವ ಉಪನ್ಯಾಸಕರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಪದವಿ ಪೂರ್ವ ಉಪನ್ಯಾಸಕರಿಗೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಸರ್ಕಾರದ ಭರವಸೆಯಂತೆ ಎರಡನೇ ಹೆಚ್ಚುವರಿ ವೇತನ, ಬಡ್ತಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2008ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ ₹ 500 ಎಕ್ಸ್ ಗ್ರೆಷಿಯಾವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ಈಗಾಗಲೇ ನೀಡಿದ ಎಕ್ಸ್ ಗ್ರೆಷಿಯಾ ಮರು ಪಾವತಿಸುವಂತೆ ನೀಡಿರುವ ಆದೇಶವನ್ನು ಹಿಂಡೆಯಬೇಕು ಎಂದು ಆಗ್ರಹಿಸಿದರು.

ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ 10, 15, 20 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್‌ ಸಮಿತಿ ರಚಿಸಿ, ಅಲ್ಲಿಯವರೆಗೆ ಪ್ರತಿ ಉಪನ್ಯಾಸಕರಿಗೆ ವಾರದಲ್ಲಿ 16 ಗಂಟೆಗಳ ಬೋಧನಾ ಅವಧಿ ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದರು..

ಪದವಿ ಪೂರ್ವ ಕಾಲೇಜುಗಳಲ್ಲಿ ಎನ್‌ಸಿಇಆರ್‌ಟಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 80 ರಿಂದ 40ಕ್ಕೆ ನಿಗದಿ ಪಡಿಸಬೇಕು. ನೆಟ್‌, ಸೆಟ್‌, ಪಿಎಚ್‌ಡಿ ವಿದ್ಯಾರ್ಹತೆ ಹೊಂದಿದ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಣಿತ ವಿಷಯದಲ್ಲಿ ಪ್ರಾಯೋಗಿಕ, ಆಂತರಿಕ ಅಂಕಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಕಲಾಲ್‌, ರಘುನಾಥ ರೆಡ್ಡಿ, ಭೀಮಣ್ಣ ಬೋಸ್ಗೆ, ಎಂ.ಹುಂಡೇಕಾರ, ರಾಕೇಶರೆಡ್ಡಿ, ಗಣಪತಿ ಪೂಜಾರಿ, ಅಶೋಕ ಕೌಳೂರ, ಭವಾನಿ, ಅನಿತಾ ರೆಡ್ಡಿ, ಪಂಪಾಪತಿ, ಮಲ್ಲಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.