ADVERTISEMENT

ಯಾದಗಿರಿ: ನ್ಯಾ. ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹ

ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿಯಿಂದ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 4:06 IST
Last Updated 28 ಸೆಪ್ಟೆಂಬರ್ 2021, 4:06 IST
ಯಾದಗಿರಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು
ಯಾದಗಿರಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು   

ಯಾದಗಿರಿ: ಪರಿಶಿಷ್ಟ ಜಾತಿ ಜನಸಂಖ್ಯಾವಾರು ಮೀಸಲಾತಿ ವರ್ಗೀಕರಣ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿವಿಕೆಯನ್ನು ಹೋಗಲಾಡಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಳೆದ 25 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ರಾಜ್ಯ ಸರ್ಕಾರ 2005 ರಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವೊಂದನ್ನು ನೇಮಕ ಮಾಡಿ ಸುದೀರ್ಘ ವರದಿಯನ್ನು ರಾಜ್ಯ ಸರ್ಕಾರಕ್ಕೆ 2012ರಲ್ಲಿ ಸಲ್ಲಿಸಿದೆ. ವರದಿ ಸಲ್ಲಿಕೆಯಾಗಿ 9 ವರ್ಷಗಳು ಗತಿಸಿದರೂ ರಾಜ್ಯ ಸರ್ಕಾರ ಈ ವರೆಗೆ ವರದಿಯನ್ನು ಸದನದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸದೇ ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಸರ್ಕಾರದ ಸಾಮಾಜಿಕ ನ್ಯಾಯ ವಿರೋಧಿ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ADVERTISEMENT

ಅನೇಕ ವರ್ಷಗಳಿಂದ ಮಾದಿಗರು ಬೀದಿಗಿಳಿದು ಹೋರಾಡುತ್ತಿದ್ದರೂ ರಾಜ್ಯ ಸರ್ಕಾರದ ಹುಸಿ ಭರವಸೆಯಿಂದ ಪುನರಾವರ್ತನೆಯಾಗುತ್ತಿದೆ. ಈಗಲೂ ನಮ್ಮ ಹೋರಾಟವನ್ನು ಕಡೆಗಣಿಸಲಾಗುತ್ತದೆ. ಆಯೋಗದ ವರದಿ 16 ವರ್ಷಗಳ ಕಾಲ ಸಮೀಕ್ಷೆ ಮಾಡಲು ಸರ್ಕಾರ ವಿಳಂಬ ನೀತಿಯನ್ನು ಅನುಸರಿಸಿರುವುದಲ್ಲದೇ ವರದಿ ಸಲ್ಲಿಕೆಯ ನಂತರವೂ 9 ವರ್ಷಗಳ ಕಾಲ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಿನಾಮೇಷ ಎಣಿಸುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸದಾಶಿವ ಆಯೋಗದ ವರದಿಯನ್ನು ತಥಾವತ್ತಾಗಿ ಜಾರಿ ಮಾಡಿ ಮಾದಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ದೇವಿಂದ್ರನಾಥ ನಾದ, ಜಿಲ್ಲಾಧ್ಯಕ್ಷ ಲಿಂಗಪ್ಪ ಹತ್ತಿಮನಿ, ಶಿವು ಮುದ್ನಾಳ, ಮಲ್ಲಣ್ಣ ದಾಸನಕೇರಿ, ಚೆನ್ನಯ್ಯ ಮಾಳಿಕೇರಿ, ಶಾಂತರಾಜ ಮೋಟ್ನಳ್ಳಿ, ಸ್ಯಾಂಸನ್ ಮಾಳಿಕೇರಿ, ಮಲ್ಲು ಮಾಳಿಕೇರಿ, ನಿಂಗಮ್ಮ ವಡ್ನಳ್ಳಿ, ಸುಭಾಷ ಮಾಳಿಕೇರಿ, ಸ್ವಾಮಿದೇವ ದಾಸನಕೇರಿ, ನಾಗರಾಜ ಬಿರನೂರ್, ಹಣಮಂತ ಲಿಂಗೇರಿ, ಮಾದೇವ ಚಾಮನಳ್ಳಿ, ಭಿಮಾಶಂಕರ ಆಲ್ದಾಳ, ಸಾಬಣ್ಣ ಸೈದಾಪುರ್, ಗೋಪಾಲ ದಾಸನಕೇರಿ, ಶಿವರಾಜ ದಾಸನಕೇರಿ, ಆಂಜನೇಯ ಬಬಲಾದ, ಮಂಜುನಾಥ ದಾಸನಕೇರಿ, ತಿಪ್ಪಣ್ಣ ಕೊನಿಮನಿ, ಅನೀಲ ಮುಂಡ್ರರಗಿ, ಅನೀಲ ಮುಂಡ್ರರಿಗಿ, ರಾಜಶೇಖರ ಎದುರುಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.