ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಬಂದೊಡ್ಡಿ ಬಳಿಯ ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಯಮನಪ್ಪ ಹಡಪದ ನದಿಯಲ್ಲಿ ಬಿದ್ದು ಹೊರಬಂದ ವ್ಯಕ್ತಿ. ಆಕಸ್ಮಿಕವಾಗಿ ನದಿಗೆ ಬಿದ್ದ ಯಮನಪ್ಪ ಕೊಚ್ಚಿಕೊಂಡು ಹೋಗುತ್ತಿದ್ದ. ನದಿಯಲ್ಲಿದ್ದ ಗಿಡವನ್ನು ಹಿಡಿದುಕೊಂಡು ನಿಂತಿದ್ದಾನೆ. ಆ ವ್ಯಕ್ತಿಯನ್ನು ಕಂಡ ಸ್ಥಳೀಯರು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ಅದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಿಸುತ್ತಿದ್ದ ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಶಾಸಕ ರಾಜಾ ವೇಣುಗೋಪಾಲ ನಾಯಕ, ನಂತರ ಅಗ್ನಿಶಾಮಕದಳ, ಪೊಲೀಸರಿಗೆ ಕರೆ ಮಾಡಿ ರಕ್ಷಿಸುವಂತೆ ತಿಳಿಸಿದ್ದಾರೆ.
ನದಿಗಿಳಿದು ಯಮನಪ್ಪನನ್ನು ಮೀನುಗಾರರು ರಕ್ಷಿಸಿದ್ದಾರೆ. ಯಮನಪ್ಪ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟು, ಬದುಕುಳಿದ ಬಂದ ಕೂಡಲೇ ಶಾಸಕ ರಾಜಾ ವೇಣುಗೋಪಾಲ ಕೈ ಮುಗಿದ ನಮಸ್ಕರಿಸಿದ್ದಾರೆ.
ಜಮೀನುಗಳು ಜಲಾವೃತ
ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಜಮೀನುಗಳು ಜಲಾವೃತವಾಗಿವೆ. ಶಹಾಪುರ, ವಡಗೇರಾ ತಾಲ್ಲೂಕಿನ ನದಿ ತೀರದ ಗ್ರಾಮಗಳ ನೂರಾರು ಎಕರೆ ಭತ್ತ, ಹತ್ತಿ ಜಮೀನುಗಳು ನೀರಿನಲ್ಲಿ ಮುಳುಗಿವೆ. ಕೊಳ್ಳೂರು ಗ್ರಾಮದ ಸಂಪರ್ಕ ಸೇತುವೆ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಕಳೆದ ಮೂರು ದಿನಗಳಿಂದ ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿದೆ.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.27 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದು, ವಡಗೇರಾ ತಾಲ್ಲೂಕಿನ ಕೃಷ್ಣಾ ನದಿ ಪಾತ್ರದ ಯಕ್ಷಂತಿ, ಹೈಯಾಳ, ಐಕೂರು, ಅನಕಸೂಗೂರು, ಚನ್ನೂರು, ಕೋಡಾಲ ಗ್ರಾಮಗಳ ನದಿ ದಂಡೆಯ ಕೆಲವು ರೈತರ ಹೊಲಗಳು ಸ್ವಲ್ಪ ಪ್ರಮಾಣದಲ್ಲಿ ಮುಳುಗಡೆಯಾಗಿವೆ.
ಐಕೂರು ಸೀಮೆಯಲ್ಲಿ ಸುಮಾರು 100 ಎಕರೆ, ಚೆನ್ನೂರು ಸೀಮೆಯಲ್ಲಿ ಸುಮಾರು 200 ಎಕರೆ, ಕೊಂಕಲ್, ತುಮಕೂರು ಸೀಮೆಯಲ್ಲಿ ಸುಮಾರು 250 ಎಕರೆ ಜಮೀನಿಗೆ ಕೃಷ್ಣಾ ಪ್ರವಾಹದ ನೀರು ನುಗ್ಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.