
ಹುಣಸಗಿ: ರಾಜ್ಯದ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೇ 1 ಮೀಸಲಾಯಿತು ನೀಡುವಂತೆ ಆಗ್ರಹಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್ ತಹಶೀಲ್ದಾರ್ ಎಂ. ಬಸವರಾಜ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮುಖಂಡ ರುದ್ರಪ್ಪ (ರಾಜು) ದೊಡ್ಡಮನಿ ಮಾತನಾಡಿ, ‘49 ಬಗೆ ಅಲೆಮಾರಿ ಸಮುದಾಯದವರಿಗೆ ಇಂದಿಗೂ ಸರ್ಕಾದ ಯಾವ ಸೌಲಭ್ಯಗಳು ಸಿಕ್ಕಿಲ್ಲ. ಹೊಟ್ಟೆ ಪಾಡಿಗೆ ಊರೂರು ಅಲೆಯುತ್ತೇವೆ. ರಾಜ್ಯ ಸರ್ಕಾರದ ನಡೆ ನಮ್ಮನ್ನು ಸಂಪೂರ್ಣ ಮೂಲೆಗುಂಪು ಮಾಡಿದೆ. ಅತ್ಯಂತ ಕಷ್ಟದಲ್ಲಿಯೇ ಜೀವನ ನಡೆಸುತ್ತಿರುವ ನಮಗೆ ಶೇ 1 ರಷ್ಟು ಮೀಸಲಾತಿ ನೀಡುವ ಮೂಲಕ ನಮ್ಮ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.
ಮುಖಂಡ ಭೀಮರಾವ್ ಒಂಟೆತ್ತು ಮಾತನಾಡಿ, ‘ನ್ಯಾ.ನಾಗಮೋಹನದಾಸ್ ಅವರ ವರದಿಯಂತೆ 49 ಜಾತಿಗಳನ್ನು ಒಳಗೊಂಡಿರುವ ಸಮುದಾಯಕ್ಕೆ ಶೇ 1 ರಷ್ಟು ಮೀಸಲಾತಿ ನೀಡಬೇಕು. ಹೋರಾಟಕ್ಕೂ ನಮ್ಮಲ್ಲಿ ಹಣಕಾಸಿನ ತೊಂದರೆ ಇದೆ. ಅನಾದಿ ಕಾಲದಿಂದಲೂ ಗ್ರಾಮೀಣ ಜನರನ್ನು ರಂಜಿಸಿ ಬದುಕು ನಡೆಸುತ್ತಿರುವ ನಮಗೆ ಮುಂದಿನ ಬದುಕು ಕತ್ತಲಾಗಿದೆ’ ಎಂದರು.
ವೇಶಭೂಷಣದೊಂದಿಗೆ ಮಹಿಳೆಯರು ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಂಕರಶಾಸ್ತ್ರಿ ಬುಡ್ಗಜಂಗಮ, ಡೊಂಬರ ಸಮುದಾಯ ಜಿಲ್ಲಾಧ್ಯಕ್ಷ ರವಿ ದೊಂಬರ್, ತಾಲ್ಲೂಕು ಅಧ್ಯಕ್ಷ ಧನಂಜಯಶಾಸ್ತ್ರಿ, ಶಿವಣ್ಣ ಕೊಂಡಿ, ಯಲ್ಲಪ್ಪ ವಜ್ಜಲ, ಅಂಬ್ರೇಶ ಪಾಂಡು, ನಾಗಯ್ಯ ಬಂಡಿವಡ್ಡರ, ಹಣಮಂತ, ಬಾಬು, ಭೀಮಶೇನ, ಕಾಟಪ್ಪ, ಯಮನಪ್ಪ ರೇವಲು, ಮಾಯಪ್ಪ ನಾರಾಯಣಪುರ, ಶಿದ್ರಾಮ ತೇಲಿ ಕೊಡೇಕಲ್ಲ, ಯಲ್ಲಪ್ಪ ಇಪ್ಪಿ, ಅನಂತ ಚನ್ನದಾಸ, ಮಾರಿಗ ದುರಗಪ್ಪ ಸಿಂಧೋಳಿ, ಶಿವಪ್ಪ ಕೊಂಡಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.