ADVERTISEMENT

ಮೀಸಲಾತಿ ವಂಚನೆ: ಆರೋಪ

ರಾಜ್ಯ ಎಸ್‌ಸಿ, ಎಸ್‍ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 10:05 IST
Last Updated 3 ಡಿಸೆಂಬರ್ 2019, 10:05 IST
ಯಾದಗಿರಿಯಲ್ಲಿ ರಾಜ್ಯ ಎಸ್‌ಸಿ, ಎಸ್‍ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಯಾದಗಿರಿಯಲ್ಲಿ ರಾಜ್ಯ ಎಸ್‌ಸಿ, ಎಸ್‍ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಯಾದಗಿರಿ:ಸರ್ಕಾರದ ವಿವಿಧ ಇಲಾಖೆಯ ಟೆಂಡರ್‌ ಕಾಮಗಾರಿಗಳಲ್ಲಿಎಸ್‍ಸಿ, ಎಸ್‍ಟಿ, ಸಿವಿಲ್ ಗುತ್ತಿಗೆದಾರರಿಗೆ ಶೇ 24.1 ಮೀಸಲಾತಿ ನೀಡದೆ ₹50 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಗಳು ಪ್ಯಾಕೇಜ್ ಮಾಡಿ ಲೋಕೋಪಯೋಗಿ ಅಧಿಕಾರಿಗಳು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ರಾಜ್ಯ ಎಸ್‌ಸಿ, ಎಸ್‍ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರುನಗರದ ಹಳೆ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸುಭಾಷವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲೆಯ ಶಾಸಕರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಬಳಿಕ ಶಾಸ್ತ್ರಿವೃತ್ತದಿಂದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ADVERTISEMENT

ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಸಿಗಬೇಕಾದ ಮೀಸಲಾತಿಯನ್ನು ತಪ್ಪಿಸಿ ವಂಚಿಸುತ್ತಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ದೂರಿದರು.

‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಬಿಡುಗಡೆಯಾದ ಅನುದಾನವನ್ನು ಟೆಂಡರ್ ಕರೆಯದೆ ತುಂಡು ಗುತ್ತಿಗೆಯಲ್ಲಿ ಅವ್ಯವಹಾರ ಮಾಡಿ, ಹಣ ದುರುಪಯೋಗ ಮಾಡಿದ್ದಾರೆ’ ಎಂದು ಆರೋಪಿಸಿದ ಅವರು, ಈ ಬಗ್ಗೆ ಲೋಕಾಯುಕ್ತ ಅಥವಾ ಉನ್ನತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಮೀಸಲಾತಿ ವಂಚಿಸಿದ ಅಧಿಕಾರಿಗಳ ವಿರುದ್ಧ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಬೇಕು. ಲೋಕೋಪಯೋಗಿ ಇಲಾಖೆಯ ಕೆಲ ಅಧಿಕಾರಿಗಳು ಕಚೇರಿಯಲ್ಲಿರದೆ ರಾಜಕೀಯ ಪ್ರಭಾವ ಬಳಸಿ ಪಾಳೆಗಾರಿಕೆ ಮಾಡುತ್ತಿದ್ದಾರೆ. ಅಂಥವರನ್ನು ಅಮಾನತು ಮಾಡಬೇಕು. ಸರ್ಕಾರದ ನಿಯಮಿ ಮೀರಿ ಒಂದೇ ಸ್ಥಳದಲ್ಲಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಡಾ.ಭೀಮಣ್ಣ ಮೇಟಿ, ಹಣಮೇಗೌಡ ಬೀರನಕಲ್, ಬಾಷುಮೀಯಾ ವಡಗೇರಾ ಮಾತನಾಡಿದರು.ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ್, ಯಂಕಪ್ಪ ರಾಠೋಡ, ಭೀಮಾಶಂಕರ ಆಲ್ದಾಳ, ಮಲ್ಲಿಕಾರ್ಜುನಗೌಡ ಬೀರನ ಕಲ್,ಸುದರ್ಶನ ನಾಯಕ, ಬಸವರಾಜ ಬಾಚವಾರ, ದೇವಿಂದ್ರಪ್ಪ, ಸಾಯಬಣ್ಣ ಸೈದಾಪುರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.