ADVERTISEMENT

ಗುರುಮಠಕಲ್‌: ಹತ್ತಿ ಮಿಲ್‌ನಲ್ಲಿ 150 ಕ್ವಿಂಟಲ್ ಅಕ್ಕಿ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:05 IST
Last Updated 16 ಅಕ್ಟೋಬರ್ 2025, 7:05 IST
<div class="paragraphs"><p>ಅಕ್ಕಿ</p></div>

ಅಕ್ಕಿ

   

ಯಾದಗಿರಿ: ಗುರುಮಠಕಲ್‌ನಲ್ಲಿ ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಹತ್ತಿ ಮಿಲ್‌ ಗೋದಾಮಿನಲ್ಲಿ ಸುಮಾರು 150 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪತ್ತೆ ಮಾಡಿದ್ದಾರೆ.

ಶ್ರೀಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್ ಹಾಗೂ ಶ್ರೀಲಕ್ಷ್ಮಿ ಬಾಲಾಜಿ ರೈಸ್ ಮಿಲ್‌ ಮುಂಭಾಗದ ಲಕ್ಷ್ಮಿ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್‌ನಲ್ಲಿ ಎರಡು ಗೋದಾಮುಗಳಿವೆ. ಹತ್ತಿ ಸಂಸ್ಕರಣೆಗೆ ಯಂತ್ರೋಪಕರಣಗಳು ಇರಲಿಲ್ಲ. ಆದರೆ, ಎರಡನೇ ಗೋದಾಮಿನಲ್ಲಿ ಪಡಿತರ ಅಕ್ಕಿಗಳ ಮೂಟೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹತ್ತಿ ಮಿಲ್ ಎಂಬ ನಾಮಫಲಕ ಮಾತ್ರವಿದೆ. ಮಿಲ್‌ಗೆ ಸಂಬಂಧಿಸಿದ ಯಂತ್ರೋಪಕರಣಗಳಿಲ್ಲ. ಅಕ್ಕಿ ಪತ್ತೆ ಆಗುತ್ತಿದ್ದಂತೆ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

‘ಸಿಐಡಿ ಅಧಿಕಾರಿಗಳು ಅಕ್ರಮ ದಾಸ್ತಾನು ಗಮನಕ್ಕೆ ತರುತ್ತಿದ್ದಂತೆ ಮೂಟೆಗಳನ್ನು ಪರಿಶೀಲಿಸಲಾಗಿದೆ. ಅಂದಾಜು 150 ಕ್ವಿಂಟಲ್‌ ಇರಬಹುದು. ಅದರಲ್ಲಿ ನುಚ್ಚು ಅಕ್ಕಿ ಇದ್ದು, ತೂಕ ಮಾಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಐಡಿ ಇನ್‌ಸ್ಪೆಕ್ಟರ್‌ಗಳಾದ ಅನಿಲ್‌ಕುಮಾರ್, ಸಚಿನ್‌ಕುಮಾರ್, ಎಎಸ್‌ಐ ಹರ್ಷಕುಮಾರ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ದಿನೇಶ ಅವರಿದ್ದ ತಂಡವು ಒಂದು ವಾರದಿಂದ ತನಿಖೆ ನಡೆಸುತ್ತಿದೆ.

ಅರ್ಜಿ ವಜಾ: ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ನಾಲ್ವರು ಆರೋಪಿಗಳು ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳ ಮನೆಗೆ ನೋಟಿಸ್‌ ಅಂಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.