
ಸಾವು
(ಪ್ರಾತಿನಿಧಿಕ ಚಿತ್ರ)
ಯಾದಗಿರಿ: ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಯಾದಗಿರಿ ಬೈಪಾಸ್ ರಸ್ತೆಯಲ್ಲಿ ಕೆಕೆಆರ್‌ಟಿಸಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿ ಸಂಭವಿಸಿ ನಗರದ ಮೈಲಾಪುರ ಅಗಸಿ ನಿವಾಸಿ ಮಲ್ಲಿಕಾರ್ಜುನ ತಾಯಪ್ಪ (44) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆನಂದ ಮರೆಪ್ಪ ಹಾಗೂ ವೆಂಕಟೇಶ ವಿಜಯಕುಮಾರ ಗಾಯಗೊಂಡಿದ್ದಾರೆ. ಬಸ್ ಚಾಲಕ ರೇವಣಸಿದ್ದಪ್ಪ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ ಕಾರ್ಯಕ್ರಮಕ್ಕೆ ಕುರಿ ಖರೀದಿಸಲು ಮಲ್ಲಿಕಾರ್ಜುನ ಸೇರಿ ಮೂವರು ಆಟೊದಲ್ಲಿ ಶಹಾಪುರಕ್ಕೆ ತೆರಳುತ್ತಿದ್ದರು. ನಗರದ ಬೈಪಾಸ್ ರಸ್ತೆಯಲ್ಲಿ ಶಹಾಪುರ ಮಾರ್ಗದಿಂದ ವೇಗವಾಗಿ ಬಂದ ಬಸ್ ಚಾಲಕ ಆಟೊಗೆ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ವೆಂಕಟೇಶ ಅವರು ಆಟೊದಿಂದ ಪುಟಿದು ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಅವರ ಹಣೆ, ಗದ್ದ, ತಲೆಗೆ ಗಂಭೀರ ಗಾಯವಾಗಿಮ ಎರಡೂ ಕಾಲುಗಳು ಮುರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆಟೊ ಚಾಲಕ ಆನಂದ ಅವರಿಗೂ ಗಾಯವಾಗಿತ್ತು ಎಂದಿದ್ದಾರೆ.
ವೃದ್ಧೆ ಸಾವು: ಪಿಂಚಣಿ ಹಣವನ್ನು ಡ್ರಾ ಮಾಡಿಕೊಳ್ಳಲು ಮೊಮ್ಮಗನ ಜೊತೆಗೆ ಬೈಕ್‌ನಲ್ಲಿ ತೆರಳಿದ್ದ ಅಜ್ಜಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಮೊಮ್ಮಗನ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಿಯಾಳ ಗ್ರಾಮದ ನಿವಾಸಿ ಬಸಲಿಂಗಮ್ಮ (75) ಮೃತ ವೃದ್ಧೆ. ಆಕೆಯ ಮೊಮ್ಮಗ ಶಿವಶಂಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಿಂಚಣಿ ಹಣವನ್ನು ಡ್ರಾ ಮಾಡಿಕೊಂಡು ಬರಲು ಬಸಲಿಂಗಮ್ಮ ಅವರು ಶಿವಶಂಕರ ಜೊತೆಗೆ ಬೈಕ್‌ನಲ್ಲಿ ಸೈದಾಪುರಕ್ಕೆ ಹೋಗಿದ್ದರು. ಮುನಗಲ್ ಸಮೀಪ ರಸ್ತೆಯ ಮೇಲೆ ಬೈಕ್ ಚಾಲನೆಯ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬಸಲಿಂಗಮ್ಮ ಅವರ ಹಣೆಗೆ ಗಾಯವಾಗಿ ರಕ್ತಸ್ರಾವ ಆಗುತ್ತಿತ್ತು. ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಚಾಲಕ ಸಾವು: ವಡಗೇರಾ ತಾಲ್ಲೂಕಿನ ಕುಮನೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಅಪಘಾತದಿಂದ ಗಾಯಗೊಂಡಿದ್ದ ಚಾಲಕ ಶರಣಪ್ಪ ಬಾಬುಮಿಯಾ (37) ಮೃತಪಟ್ಟಿದ್ದಾರೆ.
ಶರಣಪ್ಪ ಅವರು ಹೊಲದಲ್ಲಿನ ಕೆಲಸಕ್ಕಾಗಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಮಾರ್ಗದಲ್ಲಿ ವೇಗವಾಗಿ ಚಲಾಯಿಸಿಕೊಂಡು ಏಕಾಏಕಿ ತಿರುವು ತೆಗೆದುಕೊಂಡಿದ್ದರಿಂದ ಹೊಟ್ಟೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.