ADVERTISEMENT

ದುರಸ್ತಿಯಾಗದ ರಸ್ತೆ: ಸಂಚಾರ ದುಸ್ತರ

ಜನಪ್ರತಿನಿಧಿಗಳ ವಿರುದ್ಧ ಆನೂರು ಬಿ ಮತ್ತು ಕೆ ಗ್ರಾಮಸ್ಥರ ಆಕ್ರೋಶ

ಮಲ್ಲಿಕಾರ್ಜುನ ಅರಿಕೇರಕರ್
Published 26 ಸೆಪ್ಟೆಂಬರ್ 2021, 4:07 IST
Last Updated 26 ಸೆಪ್ಟೆಂಬರ್ 2021, 4:07 IST
ಸೈದಾಪುರ ಸಮೀಪದ ಆನೂರು ಗ್ರಾಮದಿಂದ ಕಂದಳ್ಳ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯ ತಗ್ಗು
ಸೈದಾಪುರ ಸಮೀಪದ ಆನೂರು ಗ್ರಾಮದಿಂದ ಕಂದಳ್ಳ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯ ತಗ್ಗು   

ಆನೂರು(ಬಿ)ಸೈದಾಪುರ: ನೆರೆ ಪ್ರವಾಹದಿಂದ ಹದಗೆಟ್ಟಿರುವ ರಸ್ತೆಯು ವರ್ಷ ಕಳೆದರೂ ಈವರೆಗೆ ದುರಸ್ತಿ ಕಂಡಿಲ್ಲ. ಈ ರಸ್ತೆಯಲ್ಲಿ ಪ್ರಯಾಣಿಕರು ಮತ್ತು ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.

ಆನೂರು ಬಿ ಮತ್ತು ಆನೂರು ಕೆ ಗ್ರಾಮಗಳ ಮಧ್ಯದಲ್ಲಿ ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿನ ಮಣ್ಣು ಕಳೆದ ವರ್ಷ ಸಂಭವಿಸಿದ್ದ ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.

‘ಇದು ವಡಗೇರಾ ಮತ್ತು ಸೈದಾಪುರ ನಡುವಿನ ಮುಖ್ಯ ರಸ್ತೆಯಾಗಿದ್ದು, 30 ಗ್ರಾಮಗಳ ಸಾವಿರಾರು ಜನರು ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇಕ್ಕಟ್ಟಾದ ರಸ್ತೆಯಲ್ಲಿ ಹಗಲಿನಲ್ಲಿ ಸ್ವಲ್ಪ ನಿಧಾನವಾದರು ಸಂಚರಿಸಬಹುದು. ಆದರೆ, ರಾತ್ರಿ ವೇಳೆ ವಾಹನ ಸವಾರರು ಸ್ವಲ್ಪವೇ ಮೈಮರತರೂ ಅಪಾಯ ತಪ್ಪದು’ ಎನ್ನುತ್ತಾರೆ ಗ್ರಾಮದ ನಿವಾಸಿಗರು.

ADVERTISEMENT

‘ಬೈಕ್‌ಗಳಲ್ಲಿ ಸಾಗಲು ಹರಸಾಹಸ ಪಡಬೇಕು. ಕಾರು, ಕ್ರಶರ್‌ನಂತಹ ಎರಡು ವಾಹನಗಳು ಮುಖಾಮುಖಿಯಾದರೆ, ರಸ್ತೆ ಬಂದ್ ಆಗುತ್ತದೆ. ಪಕ್ಕಕ್ಕೆ ಸರಿಯಲು ರಸ್ತೆ ಇಲ್ಲ. ಅಗಲವಾದ ರಸ್ತೆ ಬರುವವರೆಗೂ ಒಂದು ವಾಹನ ಹಿಮ್ಮುಖವಾಗಿ ಚಲಿಸಿದರೆ ಮಾತ್ರ ಹಾದಿ ಮಾಡಿಕೊಡಬಹುದು. ಅಲ್ಲದೇ ರಸ್ತೆಯ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ಮತ್ತಷ್ಟು ಇಕ್ಕಟ್ಟಾಗಿದೆ’ ಎನ್ನುತ್ತಾರೆಕರ್ನಾಟಕ ರಕ್ಷಣಾ ವೇದಿಕೆಯ ವಲಯ ಅಧ್ಯಕ್ಷ ನಂದಗೋಪಾಲ ಪಟ್ವಾರಿ.

‘ದೊಡ್ಡ ವಾಹನಗಳು ಸಂಚರಿಸದರೆ ರಸ್ತೆ ಸಂಪೂರ್ಣ ಕುಸಿದು, ಸಂಪರ್ಕ ಸ್ಥಗಿತವಾಗುವ ಭೀತಿ ಇದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ರಸ್ತೆ
ದುರಸ್ತಿಗೆ ಮುಂದಾಗುತ್ತಿಲ್ಲ. ದೊಡ್ಡ ಅನಾಹುತ ಸಂಭವಿಸುವ
ಮುನ್ನ ರಸ್ತೆ ದುರಸ್ತಿ ಕಾರ್ಯ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

*ಈ ರಸ್ತೆಯಲ್ಲಿ ಸೈದಾಪುರ-ವಡಗೇರಾ ತಾಲ್ಲೂಕಿಗೆ ತೆರಳುವ ಪ್ರಯಾಣಿಕರು ಮತ್ತು ವಾಹನ ಸವಾರರು ಜೀವ ಭಯದಲ್ಲಿ ಸಾಗಬೇಕಿದೆ. ಪ್ರಯಾಣಿಕರ ಗೋಳು ಕೇಳುವವರೇ ಇಲ್ಲ

-ಬಸವರಾಜ, ಆನೂರು ಬಿ ಗ್ರಾಮಸ್

*ಪ್ರವಾಹ ಬಂದು ವರ್ಷ ಕಳೆದರೂ ಕೊಚ್ಚಿ ಹೋದ ರಸ್ತೆಯ ದುರಸ್ತಿ ಕಾರ್ಯವಾಗಿಲ್ಲ. ಇದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದಕೈಗನ್ನಡಿ

-ಶಂಕರೆಡ್ಡಿಗೌಡ ಬಿಳ್ಹಾರ, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.