ಹುಣಸಗಿ: ನಿರ್ವಹಣೆಯ ಕೊರತೆಯಿಂದಾಗಿ ತಾಲ್ಲೂಕಿನ ದೇವಪುರ-ಮನಗೂಳಿ ರಾಜ್ಯ ಹೆದ್ದಾರಿ ಸೇರಿದಂತೆ ಇತರ ರಸ್ತೆಗಳು ಹದೆಗೆಟ್ಟಿವೆ. ನಿತ್ಯ ಜನರು ಪ್ರಯಾಣಕ್ಕೆ ಪ್ರಯಾಸ ಪಡುವಂತಾಗಿದೆ.
ಪಟ್ಟಣದ ಮೂಲಕ ಹಾದು ಹೋಗುವ, ಅಧಿಕ ಸಂಚಾರ ದಟ್ಟಣೆ ಇರುವ ದೇವಪುರ ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ಮಳೆಯಿಂದ ಅಲ್ಲಲ್ಲಿ ದೊಡ್ಡ ಗಾತ್ರದ ತಗ್ಗುಗಳು ಕಾಣಿಸಿಕೊಂಡಿವೆ. ಇದೇ ಸ್ಥಿತಿ ಮುಂದುವರೆದರೇ ಈ ಪ್ರಮುಖ ರಸ್ತೆ ಕೂಡಾ ಗುಂಡಿಗಳ ಮಯವಾಗಲಿದೆ ಎನ್ನುತ್ತಾರೆ ವಾಹನ ಸವಾರರು.
‘ರಸ್ತೆ ಬದಿ ಇರುವ ಜಾಲಿ ಕಂಟಿಗಳು ರಸ್ತೆಗೆ ಆವರಿಸಿಕೊಂಡಿದ್ದು ಪಟ್ಟಣದ ಹೊರವಲಯ ಹಾಗೂ ಬನ್ನಟ್ಟಿ, ಕಲ್ಲದೇವನಹಳ್ಳಿ, ಹೆಬ್ಬಾಳ ಗ್ರಾಮದ ಬಳಿ ತಿರುವಿನಲ್ಲಿ ರಸ್ತೆ ಕಾಣದಂತೆ ಜಾಲಿಕಂಟಿಗಳು ಆವರಿಸಿಕೊಂಡಿವೆ. ಸ್ವಲ್ಪ ಯಾಮಾರಿದರೂ ಅಪಘಾತವಾಗುತ್ತವೆ’ ಎಂದು ಸಿದ್ದನಗೌಡ ಗುರಡ್ಡಿ ಹೇಳಿದರು.
ಹುಣಸಗಿಯಿಂದ ಕೆಂಭಾವಿಗೆ ಹೋಗುವ ರಸ್ತೆಯ ಸಂಪೂರ್ಣ ಹದೆಗೆಟ್ಟಿದೆ. ಟೆಂಡರ್ ಪ್ರಕ್ರಿಯೆ ಮುಗಿದ್ದರೂ ಇಂದಿಗೂ ಕೆಲಸ ವೇಗ ಪಡೆದಿಲ್ಲ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಎಷ್ಟೋ ಬಾರಿ ರಸ್ತೆಯಲ್ಲಿರುವ ತಗ್ಗು ತಪ್ಪಿಸಲು ಹೋಗಿ ತೊಂದರೆಗಿಡಾದ ಉದಾಹರಣೆಗಳಿವೆ. ಮಲ್ಲನಗೌಡ ನಗನೂರು, ಅಮರೇಶ ಬಿರಾದಾರ ತಿಳಿಸಿದರು.
‘ಕೊಡೇಕಲ್ಲದಿಂದ ನಾರಾಯಣಪುರಕ್ಕೆ ಹೋಗುವ ರಸ್ತೆ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯದ ಬಳಿ, ಮುಂಭಾಗದ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಿವೆ. ಈ ರಸ್ತೆಯ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಪ್ರಯತ್ನಿಸಿಲ್ಲ’ ನಾರಾಯಣಪುರ ಗ್ರಾಮದ ಕಿರಣ್ ಜೋಶಿ ಹಾಗೂ ಮುತ್ತು ಶೃಂಗೇರಿ ಹೇಳಿದರು.
ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಒಂದು ಕಿ.ಮಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಕಾರ್ಯ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ ನಿತ್ಯ ಕಿರಿದಾದ ರಸ್ತೆಯಲ್ಲಿಯೇ ಹರಸಾಹಸ ಪಟ್ಟು ತೆರಳುವಂತಾಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ವಹಿಸಲಿ ಎನ್ನುತ್ತಾರೆ ತಾಲ್ಲೂಕು ಕರವೇ ಅಧ್ಯಕ್ಷ ಬಸವರಾಜ ಚನ್ನೂರು.
ಹುಣಸಗಿ ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟೂ ಬೇಗ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದುರಾಜಾ ವೇಣುಗೋಪಾಲ ನಾಯಕ ಸುರಪುರ ಶಾಸಕ
‘ಮಳೆಗೆ ರಸ್ತೆಗಳು ಹಾನಿ’
ಕಳೆದ ಎರಡು ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದಾಗಿ ತಾಲ್ಲೂಕಿನಲ್ಲಿರುವ ಸುಮಾರು 10 ಕಿಮಿ ಯಷ್ಟು ಜಿಲ್ಲಾ ರಸ್ತೆ ಹಾಗೂ 6 ಕಿಮಿ ರಾಜ್ಯ ಹೆದ್ದಾರಿ ರಸ್ತೆ ಹಾನಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ಜಿ.ಪಾಟೀಲ ಹೇಳಿದರು. ಈ ಕುರಿತು ಇಗಾಗಲೇ ಹಾನಿಯ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಲಭ್ಯವಾಗುತ್ತಿದ್ದಂತೆ ಕೆಲಸ ಆರಂಭಿಸುವದಾಗಿ ಹೇಳಿದರು. ಅಲ್ಲದೇ ಕೆಂಭಾವಿ ಹುಣಸಗಿ ರಸ್ತೆ ದುರಸ್ತಿಗಾಗಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ. ಅಂದಾಜು 20 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಗಂಡಲಗೇರಾ ಗ್ರಾಮದ ಬಳಿ ಕೆಲಸ ಪ್ರಗತಿಯಲ್ಲಿದ್ದು ಮಳೆಗಾಲ ಮುಗಿಯುತ್ತಿದ್ದಂತೆ ವೇಗ ಹೆಚ್ಚಿಸಲು ಸೂಚಿಸಿದೆ ಎಂದು ವಿವರಿಸಿದರು. ತಾಲ್ಲೂಕಿನ ಗುಳಬಾಳ ಗ್ರಾಮದಿಂದ ರಾಜನಕೋಳೂಗೆ ಹೋಗುವ ರಸ್ತೆ ದೊಡ್ಡ ತಗ್ಗುಗಳಿಂದ ಸಂಚಾರ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮೀಣ ರಸ್ತೆಗಳು ಇದೇ ಸ್ಥಿತಿ ಇವೆ. ಈ ಮಾರ್ಗವಾಗಿ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ರೈತರು ಕೊಡೇಕಲ್ಲಗೆ ಹಾಗೂ ರಾಜನಕೋಳುರ ಗೆ ತೆರಳುತ್ತಾರೆ. ಆದ್ದರಿಂದ ತಾತ್ಕಾಲಿಕವಾಗಿಯಾದರೂ ದುರಸ್ತಿಗೋಳಿಸಲಿ ಎಂದು ಮಾಳನೂರು ಗ್ರಾಮದ ಸಿದ್ದು ಮಲೇಶ್ವರ ತಿಳಿಸಿದರು.
‘ಸೇತುವೆ ಎತ್ತರಗೊಳಿಸಿ’
ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಿಂದ ಗೆದ್ದಲಮರಿಗೆ ಹೋಗುವ ರಸ್ತೆಯಲ್ಲಿರುವ ಸೇತುವೆ ಕೆಳ ಹಂತದಲ್ಲಿದ್ದು ಮಳೆಯಾದರೇ ಈ ರಸ್ತೆ ಸಂಚಾರ ಬಂದ್ ಆಗುತ್ತದೆ. ಆದ್ದರಿಂದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇತುವೆಯನ್ನು ಎತ್ತರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗೆದ್ದಲಮರಿ ಗ್ರಾಮದ ಶಿವರಾಜ ಹೊಕ್ರಾಣಿ ಹೇಳುತ್ತಾರೆ.
ಸೇತುವೆಗಳ ನಿರ್ಮಾಣ
ಕೊರತೆಗಳ ಮಧ್ಯಯೂ ರಸ್ತೆಗಳ ಸೇತುವೆ ನಿರ್ಮಾಣ ಮಾಡಲಾಗಿದೆ. ಬಲಶೆಟ್ಟಿಹಾಳ ಗ್ರಾಮದ ಬಳಿ ಮುಖ್ಯರಸ್ತೆಯ ಸೇತುವೆ ಹಾಗೂ ಗೆದ್ದಲಮರಿ ಗ್ರಾಮದ ಬಳಿಯ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಸಂಚಾರ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.