ವಡಗೇರಾ: ‘ಪಟ್ಟಣದಿಂದ ತುಮಕೂರ ಗ್ರಾಮಕ್ಕೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ’ ಎಂದು ನಿತ್ಯ ಈ ರಸ್ತೆಯ ಮೇಲೆ ವಾಹನ ಚಲಾಯಿಸುವ ಚಾಲಕರು ದೂರುತ್ತಾರೆ.
‘ಕೇವಲ 8 ಕಿ.ಮೀ. ಅಂತರದಲ್ಲಿ ಇರುವ ತುಮಕೂರ ಗ್ರಾಮವನ್ನು ತಲುಪಲು ಸುಮಾರು 30 ರಿಂದ 40 ನಿಮಿಷಗಳು ಬೇಕಾಗುತ್ತದೆ. ಇದರಿಂದಾಗಿ ತುರ್ತು ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಲು ಸಾಕಷ್ಟು ವಿಳಂಬವಾಗುತ್ತಿದೆ. ಎಷ್ಟೊ ವೇಳೆ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಸ್ತೆ ಹದಗೆಟ್ಟಿರುವುದರಿಂದ ರಸ್ತೆಯ ನಡುವೆ ಹೆರಿಗೆಯಾಗಿವೆ’ ಎಂದು ತುಮಕೂರು ಗ್ರಾಮಸ್ಥರು ಹೇಳುತ್ತಾರೆ.
‘ಈ ರಸ್ತೆಯ ಮೇಲೆಲ್ಲಾ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ರಸ್ತೆಗೆ ಹಾಕಿದ ಟಾರ್ ಕಿತ್ತು ಹೋಗಿ ಜಲ್ಲಿ ಕಲ್ಲುಗಳು ರಸ್ತೆಯ ತುಂಬೆಲ್ಲಾ ಹರಡಿವೆ. ವಾಹನ ಚಾಲಕರು ಈ ರಸ್ತೆಯ ಮೇಲೆ ವಾಹನ ಚಲಾಯಿಸಬೇಕಾದರೆ ಮೈಯೆಲ್ಲಾ ಕಣ್ಣಾಗಿಸಿ ವಾಹನವನ್ನು ಚಲಾಯಿಸಬೇಕು. ವಾಹನ ಚಾಲನೆಯಲ್ಲಿ ಅಜಾಗರೂಕತೆ ತೋರಿದರೆ ವಾಹನದಿಂದ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಗುತ್ತದೆ. ಹಲವು ಸಾರಿ ಅಪಘಾತಗಳಾಗಿವೆ’ ಎಂದು ದ್ವಿಚಕ್ರ ವಾಹನ ಸವಾರರು ಹೇಳುತ್ತಾರೆ.
‘ಈ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕಾರಣ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಪಕ್ಕದಲ್ಲಿಯೇ ಕೋರಗ್ರೀನ್ ಸಕ್ಕರೆ ಕಾರ್ಖಾನೆ ಇರುವುದರಿಂದ ಲಾರಿಗಳು ಸಹ ಸಂಚರಿಸುತ್ತವೆ. ಈ ಬಗ್ಗೆ ಅನೇಕ ವೇಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ’ ಎಂದು ವಾಹನ ಚಾಲಕರು ಹಾಗೂ ಸಾರ್ವಜನಿಕರು ಅರೋಪಿಸುತ್ತಾರೆ.
‘ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ.
ರಸ್ತೆ ಹದಗೆಟ್ಟ ಕಾರಣ ನನ್ನ ಎದುರೇ ದ್ವಿಚಕ್ರ ವಾಹನ ಸವಾರ ಮುಂದೆ ಹೋಗುವ ವಾಹನಕ್ಕೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ತಾನೇ ವಾಹನದಿಂದ ಬಿದ್ದಿದ್ದಾನೆಸಿದ್ದಪ್ಪ ತಮ್ಮಣ್ಣೋರ ಗ್ರಾ.ಪಂ. ಅಧ್ಯಕ್ಷ ವಡಗೇರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.