ADVERTISEMENT

ರೋಹಿಣಿ ಮಳೆ: ಹತ್ತಿ ಬಿತ್ತನೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 5:57 IST
Last Updated 5 ಜೂನ್ 2025, 5:57 IST
ವಡಗೇರಾ ತಾಲ್ಲೂಕಿನ ಹಾಲಗೇರಾ ಸೀಮಾಂತರ ಪ್ರದೇಶದಲ್ಲಿರುವ ಜಮೀನೊಂದರಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿರುವುದು
ವಡಗೇರಾ ತಾಲ್ಲೂಕಿನ ಹಾಲಗೇರಾ ಸೀಮಾಂತರ ಪ್ರದೇಶದಲ್ಲಿರುವ ಜಮೀನೊಂದರಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿರುವುದು   

ವಡಗೇರಾ: ಕಳೆದ ವಾರ ಬಂದ ರೋಹಿಣಿ ಮಳೆ ರೈತರ ಮುಖದಲ್ಲಿ ಸಂತಸ ತಂದಿದ್ದು, ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.

ಏಪ್ರಿಲ್‌ ಕೊನೆಯ ವಾರ ಹಾಗೂ ಮೇ ತಿಂಗಳಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ನೇಗಿಲನ್ನು ಹೊಡೆದು ಜಮೀನಿನಲ್ಲಿ ಇದ್ದ ಕಳೆ, ಕಸಕಟ್ಟಿ ತೆಗೆದು ಜಮೀನು ಹದಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರು.

ಎರೆಮಣ್ಣು ( ಕಪ್ಪುಮಣ್ಣು) ಹೊಂದಿರುವ ಜಮೀನುಗಳಲ್ಲಿ ಜೂನ್‌ 15, ಕೆಂಪುಮಣ್ಣು ಇರುವ ಜಮೀನುಗಳಲ್ಲಿ ಜುಲೈ ತಿಂಗಳವರೆಗೆ ಬಿತ್ತನೆ ಮಾಡಲು ಅವಕಾಶವಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಕಪ್ಪು ಜಮೀನುಗಳು ಇರುವುದರಿಂದ ಹಾಗೂ ಜಮೀನಿನಲ್ಲಿ ತೇವಾಂಶ ಇರುವುದರಿಂದ ಅನೇಕ ರೈತರು ಬುಧವಾರದಿಂದ ಹತ್ತಿ ಬೀಜಗಳನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.

ADVERTISEMENT

ವಡಗೇರಾ ಭಾಗದಲ್ಲಿ ಸಾಮಾನ್ಯವಾಗಿ ಮೃಗಶೀರದ (ಮಿರಗ್) ನಂತರ ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ ಹಾಗೂ ಹತ್ತಿಯನ್ನು ಬಿತ್ತನೆ ಮಾಡುತ್ತಾರೆ. ಆದರೆ ರೋಹಿಣಿ ಮಳೆ ಸಕಾಲಕ್ಕೆ ಬಂದ ಕಾರಣ ತಾಲ್ಲೂಕಿನ ರೈತರು ಮೃಗಶಿರಕ್ಕಿಂತ ಮುಂಚೆ (ಮುಂಕಟವಾಗಿ) ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 26,800 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸಕಾಲದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ರೈತರಿಗೆ ಸಲಹೆ ಸೂಚನೆಗಳನ್ನು ಹಾಗೂ ಮಾರ್ಗದರ್ಶನವನ್ನು ಮಾಡುತ್ತ ಇದ್ದರೆ, ಈ ವರ್ಷ ರೈತರು ಹೆಚ್ಚಿನ ಇಳುವರಿ ಪಡೆಯುವುದರ ಜತೆಗೆ ಆರ್ಥಿಕವಾಗಿ ಸದೃಢರಾಗ ಬಲ್ಲರು ಎಂಬುದು ರೈತರ ಒತ್ತಾಸೆ.

ರೋಹಿಣಿ ಮಳೆ ಚೆನ್ನಾಗಿ ಸುರಿದಿರುವುದರಿಂದ ಜಮೀನಿನಲ್ಲಿ ಅಗತ್ಯ ತೇವಾಂಶವಿದ್ದು ಸಕಾಲದಲ್ಲಿ ಮಳೆ ಬಂದರೆ ಚೆನ್ನಾಗಿ ಹತ್ತಿ ಬೆಳೆಯ ಇಳುವರಿ ಬರುತ್ತದೆ.
– ಶರಣಪ್ಪ ಜಡಿ, ಪ್ರಗತಿಪರ ರೈತ

‘ಕಪ್ಪು ಮಣ್ಣಿನಲ್ಲಿ ಹತ್ತಿ ಬಿತ್ತನೆ ಆರಂಭಿಸಿ’

‘ಮಳೆ ಉತ್ತಮವಾಗಿ ಸುರಿದಿರುವುದರಿಂದ ಜಮೀನುಗಳಲ್ಲಿ ಅಗತ್ಯ ತೇವಾಂಶ ಇದ್ದು ರೈತರು ಕಪ್ಪು ಮಣ್ಣಿನಲ್ಲಿ ಹತ್ತಿಯನ್ನು ಬಿತ್ತನೆ ಮಾಡಲು ಆರಂಭಿಸಬಹುದು’ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೃಗಶಿರಕ್ಕಿಂತ ಮುಂಚೆ ಹತ್ತಿ ಬೀಜಗಳನ್ನು ಜಮೀನುಗಳಲ್ಲಿ ಬಿತ್ತನೆ ಮಾಡಿದರೆ ರೋಗ ರಹಿತ ಬೆಳೆಯನ್ನು ತೆಗೆಯುವುದರ ಜತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.