ADVERTISEMENT

ಕೆಂಭಾವಿ: ಆರ್‌ಎಸ್‌ಎಸ್‌ ಪಥ ಸಂಚಲನ; ಗಣವೇಷಧಾರಿಗಳಿಗೆ ಹೂಮಳೆಗೈದ ಜನ

ಆರ್‌ಎಸ್‌ಎಸ್‌ ಶತಾಬ್ದಿ ಆಚರಣೆ: ಕೆಂಭಾವಿಯಲ್ಲಿ ಶಿಸ್ತುಬದ್ಧ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:46 IST
Last Updated 5 ನವೆಂಬರ್ 2025, 6:46 IST
ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆದ ಆರ್.ಎಸ್.ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ ಸಂಘದ ಗಣವೇಷಧಾರಿಗಳು
ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆದ ಆರ್.ಎಸ್.ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ ಸಂಘದ ಗಣವೇಷಧಾರಿಗಳು   

ಕೆಂಭಾವಿ: ಕಣ್ಣು ಹಾಯಿಸಿದಷ್ಟು ಜನ, ಶಿಸ್ತುಬದ್ಧ ಗಣವೇಷಧಾರಿಗಳ ಸಾಲು, ಮೊಳಗಿದ ಜೈ ಶ್ರೀರಾಮ ಘೋಷಣೆ, ಎಲ್ಲಿ ಕೇಳಿದರಲ್ಲಿ ಭಾರತ ಮಾತಾ ಕಿ ಜೈ ಘೋಷಣೆ...

ಪಟ್ಟಣದಲ್ಲಿ ಮಂಗಳವಾರ ನಡೆದ ಆರ್.ಎಸ್.ಎಸ್ ಪಥ ಸಂಚಲನದಲ್ಲಿ ಈ ದೃಶ್ಯ ಕಂಡುಬಂತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂಘ ಶತಾಬ್ದಿ ಆಚರಣೆ ಮತ್ತು ಬೃಹತ್ ಪಥ ಸಂಚಲನದಲ್ಲಿ ನಿರೀಕ್ಷೆಗೂ ಮೀರಿ ಜನ ಕೂಡಿತ್ತು.

ADVERTISEMENT

ಸಂಜೆ 4 ಗಂಟೆಗೆ ಪಟ್ಟಣದ ಖಾಸಗಿ ಮೈದಾನದಿಂದ ಆರಂಭವಾದ ಪಥ ಸಂಚಲನದಲ್ಲಿ ಗಣವೇಷಧಾರಿಗಳು 4 ಕಿ.ಮೀನಷ್ಟು ಪಥ ಸಂಚಲನ ಮಾಡಿದರು. ಕಳೆದ ಒಂದು ವಾರದಿಂದ ಈ ಪಥ ಸಂಚಲನಕ್ಕೆ ಅನೇಕ ಅಡೆತಡೆಗಳು ಬಂದರೂ ಜಿಲ್ಲಾಡಳಿತದ ಅನುಮತಿ ಪಡೆದು ಕಾನೂನು ಬದ್ಧವಾಗಿ ಪಥ ಸಂಚಲನ ಮಾಡಿದರು.

ನಿರೀಕ್ಷೆಗೂ ಮೀರಿ ಜನ: ಪಥ ಸಂಚಲನದಲ್ಲಿ 300 ಗಣವೇಷಧಾರಿಗಳು ಭಾಗವಹಿಸಬಹುದು ಎಂಬ ಸ್ಥಳೀಯ ಸಂಘಟನೆ ನಿರೀಕ್ಷೆ ಇತ್ತು. ಆದರೆ ಅವರ ನಿರೀಕ್ಷೆಗೂ ಮೀರಿ ಸುಮಾರು 800 ಗಣವೇಷಧಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಪಥ ಸಂಚಲನದ ಹಿಂದೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿ ಪ್ರೋತ್ಸಾಹ ನೀಡಿದರು. ಟ್ರ್ಯಾಕ್ಟರ್‌ನಲ್ಲಿ ಭಾರತ ಮಾತೆ ಮತ್ತು ಸಂಘ ಪರಿವಾರದ ಅನೇಕರ ಭಾವಚಿತ್ರಗಳ ಮೆರವಣಿಗೆ ನಡೆಯಿತು.

ಹೂಮಳೆಗೈದ ಮಹಿಳೆಯರು: ಪಥ ಸಂಚಲನ ಮಾರ್ಗದಲ್ಲಿ ರಂಗೋಲಿ, ಹೂಗಳಿಂದ ಅಲಂಕಾರ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ಸ್ವಾಗತ ಬ್ಯಾನರ್, ಕಟೌಟ್, ಕಮಾನುಗಳು ಅಳವಡಿಸಲಾಗಿತ್ತು. ಪಥಸಂಚಲನದ ವೇಳೆ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸೇರಿದಂತೆ ಪಟ್ಟಣದ ಜನತೆ ಗಣವೇಷಧಾರಿಗಳನ್ನು ಪುಷ್ಪವೃಷ್ಟಿಯ ಮೂಲಕ ಸ್ವಾಗತಿಸಿದರು.

ಗಮನಸೆಳೆದ ಮಕ್ಕಳ ಪಥಸಂಚಲನ: ಗಣವೇಷಗಳಲ್ಲಿ 4ರಿಂದ 10 ವರ್ಷದವರೆಗಿನ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೇ ನಿಂತು ಗಣವೇಷಧಾರಿಗಳಿಗೆ ಚಿಣ್ಣರು ಉತ್ಸಾಹ ತುಂಬಿದರು.

ಅಣಕು ಪ್ರದರ್ಶನ: ಚೌಡಿ ಕಟ್ಟೆ ಮಧ್ಯೆ ಯುವಕನೋರ್ವ ದೇಶಭಕ್ತಿ ಸಾರುವ ಮತ್ತು ಧರ್ಮ ರಕ್ಷಣೆಯ ಮಹತ್ವ ಸಾರುವ ಕುರಿತು ಕೈ ಮತ್ತು ಕಾಲುಗಳಿಗೆ ಸರಪಳಿ ಬಿಗಿದು ಮೈಮೇಲೆ ಕೃತಕ ರಕ್ತ ಚೆಲ್ಲುವ ಮೂಲಕ ಕೈಗೊಂಡ ಅಣಕು ಪ್ರದರ್ಶನ ನೋಡುಗರನ್ನು ಸೆಳೆಯಿತು.

ಪುರಸಭೆ ಪಕ್ಕದ ಖಾಸಗಿ ಮೈದಾನದಿಂದ ಆರಂಭವಾದ ಪಥ ಸಂಚಲನ ಗೌಡರ ಓಣಿ, ಝೆಂಡಾ ಕಟ್ಟಾ, ತೋಟದಪ್ಪ ದೇವಸ್ಥಾನ, ಮಲ್ಲಯ್ಯ ದೇವಸ್ಥಾನ, ಸೊನ್ನದ ಬಡಾವಣೆ, ಕಾಳಿಕಾ ದೇವಿ ದೇವಸ್ಥಾನ, ಟಿಪ್ಪು ಸುಲ್ತಾನ್‌ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ, ಶ್ರೀರಾಮ ಚೌಕ್, ಎಸ್‌ಬಿಐ ವೃತ್ತ, ಬಸವೇಶ್ವರ ವೃತ್ತ, ಮ್ಯಾಗೇರಿ, ಹಳೆ ಬಸ್ ನಿಲ್ದಾಣ, ಮುಖ್ಯ ಬಜಾರ್‌ ಮಾರ್ಗವಾಗಿ ಪುನಃ ಖಾಸಗಿ ಮೈದಾನಕ್ಕೆ ಬಂದು ತಲುಪಿತು.

ಪಥ ಸಂಚಲನದಲ್ಲಿ ಭಾಗಿಯಾದ ಸಂಘ ಪರಿವಾರದ ಪ್ರಮುಖರು: ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ, ಜಿಲ್ಲಾ ಶಾರೀರಿಕ ಪ್ರಮುಖ ಮೈಲಾರಿ ಬೈಚಬಾಳ, ತಾಲ್ಲೂಕು ಕಾರ್ಯವಾಹಕ ಅಯ್ಯಣ್ಣ ಸುಂಗಿ, ಅಮೀನರೆಡ್ಡಿ ಯಾಳಗಿ, ಶಂಕರ ಕರಣಗಿ, ಮಾಣಿಕರಾಜ, ಸಚಿನ್‌ ತುಂಬಗಿ, ಮಲಕಪ್ಪ ಶಹಾಪುರ, ಮಲ್ಲೇಶಪ್ಪಗೌಡ, ಸಂಗಮೇಶ ಇಜೇರಿ, ಪ್ರಭು ಮುತ್ತಗಿ, ಗಿರಿರಾಜ ಶಹಾಪುರ, ಸಂತೋಷ ಗುತ್ತೇದಾರ, ಪ್ರಕಾಶ ಹೊಸಮನಿ, ಅಂಬೋಜಿ.

ಡ್ರೋಣ್ ಕಣ್ಗಾವಲು: ಪಥಸಂಚಲನದ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ನೇತೃತ್ವದಲ್ಲಿ ಎಎಸ್‍ಪಿ-1, ಡಿವೈಎಸ್ಪಿ-3, ಸಿಪಿಐ-8, ಎಎಸ್‌ಐ-19, ಹೆಡ್‌ಕಾನ್‌ಸ್ಟೆಬಲ್‌ ಮತ್ತು ಕಾನ್‌ಸ್ಟೆಬಲ್‌ 147, ಡಿ.ಆರ್ ತುಕಡಿ-5, ಕೆಎಸ್‌ಆರ್‌ಪಿ ತುಕಡಿ-2 ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು. ಡ್ರೋಣ್ ಕಣ್ಗಾವಲು ಇರಿಸಲಾಗಿತ್ತು.

ಪಥ ಸಂಚಲನದಲ್ಲಿ ಗಣವೇಷ ಧರಿಸಿದ ಪುಟ್ಟ ಬಾಲಕ
ದೇಶ ರಕ್ಷಣೆ ಮತ್ತು ಧರ್ಮ ರಕ್ಷಣೆಯ ತತ್ವ ಸಾರುವ ಅಣಕು ಪ್ರದರ್ಶನ ತೋರಿದ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.