ADVERTISEMENT

ಆರ್‌ಟಿಇ ಸೌಲಭ್ಯ ನೀಡಲು ಆಗ್ರಹ

ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 1:59 IST
Last Updated 11 ಡಿಸೆಂಬರ್ 2019, 1:59 IST
ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೌಲಭ್ಯ ನೀಡುವಂತೆ ಆಗ್ರಹಿಸಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯತು
ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೌಲಭ್ಯ ನೀಡುವಂತೆ ಆಗ್ರಹಿಸಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯತು   

ಯಾದಗಿರಿ: ಶಿಕ್ಷಣ ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೌಲಭ್ಯ ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಹಾಗೂ ಅಧಿಕಾರಿಗಳ ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿದ್ದು, ಇಂತಹ ವಿದ್ಯಾದಾನ ಕಾರ್ಯದಲ್ಲಿ ನಿರತವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಷ ಪ್ರಾಶನಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಜನಸಾಮಾನ್ಯರ ಮಕ್ಕಳು ಪಡೆಯುತ್ತಿರುವ ಶಿಕ್ಷಣದಿಂದಾಗಿ ವರ್ಗರಹಿತ ಸಮಾಜಕ್ಕೆ ನಾಂದಿಯಾಗಿದೆ. ಇದನ್ನು ಸಹಿಸದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅವೈಜ್ಞಾನಿಕ ಕಾನೂನು ರೂಪಿಸಿ ಖಾಸಗಿ ಶಾಲೆಗಳನ್ನು ಹತ್ತಿಕ್ಕುತ್ತಿದೆ’ ಎಂದು ದೂರಿದರು.

‘ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡದ ಕಾರಣ ಶಿಕ್ಷಣದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ದೂರದರು.
ಸಂಘದ ಜಿಲ್ಲಾಧ್ಯಕ್ಷ ವಿಜಯ ಎಂ.ರಾಠೋಡ ಮಾತನಾಡಿ, ‘ಖಾಸಗಿ ಶಾಲೆಗಳ ನವೀಕರಣ ಪದ್ದತಿ ರದ್ದು ಪಡಿಸಬೇಕು. 1995ರ ನಂತರ ಪ್ರಾರಂಭವಾದ ಶಾಲೆಗಳನ್ನು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಅನುದಾನಕ್ಕೆ ಒಳಪಡಿಸಬೇಕು. 371 (ಜೆ) ಅಡಿ ಈ ಭಾಗದ ಖಾಸಗಿ ಶಾಲೆಗಳಿಗೆ ಕೆಕೆಆರ್‌ಡಿಬಿಯಿಂದ ಅನುದಾನ ನೀಡಬೇಕು. ಖಾಸಗಿ ಶಾಲೆಯ ಶಿಕ್ಷಕರುಗಳಿಗೆ ಕನಿಷ್ಠ ವೇತನ ನೀಡಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಖಾಸಗಿ ಶಾಲಾ ಮಕ್ಕಳಿಗೂ ನೀಡಬೇಕು. ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ADVERTISEMENT

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಕೃಷ್ಣಮೂರ್ತಿ ಕುಲಕರ್ಣಿ, ಸಂಘದ ಖಜಾಂಚಿ ಸಾಯಿಬಣ್ಣ ಬಸವಂತಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಗುಡಿಮನಿ, ಪರಮೇಶ್ವರಪ್ಪ, ಶರಣಪ್ಪ ಕಟ್ಟಿಮನಿ, ಆನಂದ ಕಾಡ್ಲೂರು, ಮಹಾಲಕ್ಷ್ಮಿ ಪಾಟೀಲ, ಬಸವರಾಜ ಶಿವರಾಯ, ರುದ್ರಗೌಡ ಪಾಟೀಲ, ಮಲ್ಲಿ ಕಾರ್ಜುನ ಮೇಟಿ, ಎಸ್.ಬಿ. ರ್‍ಯಾಖಾ, ಮಲ್ಲಿಕಾರ್ಜುನ ಗೋಸಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.