ADVERTISEMENT

371 (ಜೆ) ಅನುಷ್ಠಾನಕ್ಕೆ ಪಕ್ಷಾತೀತ ಹೋರಾಟ

ರುಕ್ಮಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನೋತ್ಸವ: ಶಾಸಕ ರಾಜೂಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 4:37 IST
Last Updated 14 ಮಾರ್ಚ್ 2022, 4:37 IST
ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಶಾಸಕ ರಾಜೂಗೌಡ ಮಾತನಾಡಿದರು. ಚಂದ್ರಕಾಂತ ಭಂಡಾರೆ, ಮಹಾದೇವಪ್ಪ ಚಟ್ಟಿ, ಶಶೀಲ ನಮೋಶಿ ಇದ್ದರು
ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಶಾಸಕ ರಾಜೂಗೌಡ ಮಾತನಾಡಿದರು. ಚಂದ್ರಕಾಂತ ಭಂಡಾರೆ, ಮಹಾದೇವಪ್ಪ ಚಟ್ಟಿ, ಶಶೀಲ ನಮೋಶಿ ಇದ್ದರು   

ಸುರಪುರ: ‘ಹಿಂದುಳಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ದೊರಕಿಸುವಲ್ಲಿ ಜಾರಿಗೆ ಬಂದ 371 (ಜೆ) ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ’ ಎಂದು ಶಾಸಕ ರಾಜೂಗೌಡ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ರುಕ್ಮಾಪುರ ಗ್ರಾಮದ ನಮ್ಮೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘2021ರ ಜೂನ್ 6ರಂದು ಅಧಿಕಾರಿಗಳ ಉದ್ದೇಶ ಪೂರ್ವದಿಂದಲೋ ಅಥವಾ ನಿರ್ಲಕ್ಷದಿಂದಲೋ ಖಾಲಿ ಉಳಿದ ಕಲ್ಯಾಣ ಕರ್ನಾಟಕದ ಹುದ್ದೆಗಳನ್ನು ಇತರ ಭಾಗದವರಿಗೂ ನೀಡಬಹುದು ಎಂದು ಆದೇಶ ಹೊರಡಿಸಲಾಗಿದೆ. ಇದರಿಂದ ನಮ್ಮ ಭಾಗದವರಿಗೆ ಅನ್ಯಾಯವಾಗುತ್ತಿದೆ’ ಎಂದರು.

ADVERTISEMENT

‘ಇದನ್ನು ಸರಿಪಡಿಸಲು ಕಲ್ಯಾಣ ಕರ್ನಾಟಕದ 42 ಶಾಸಕರು ಪಕ್ಷಭೇದ ಮರೆತು ಹೋರಾಟ ಮಾಡುತ್ತಿದ್ದೇವೆ. ಸದನದಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿದೆ. ನಮ್ಮ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವ ಹೋರಾಟಕ್ಕೂ ಸಿದ್ಧ’ ಎಂದರು.

‘ತಾಲ್ಲೂಕಿನಲ್ಲಿ ದೇವರಗೋನಾಲ ಮತ್ತು ರುಕ್ಮಾಪುರ ಗ್ರಾಮಗಳು ಶೈಕ್ಷಣಿಕ ಸಾಧನೆ ಮಾಡಿವೆ. ಎರಡೂ ಗ್ರಾಮಗಳು ವಿದ್ಯೆಯ ತವರೂರು. ನಮ್ಮ ಭಾಗದವರು ಐಎಎಸ್, ಐಪಿಎಸ್ ಆಗಬೇಕೆನ್ನುವುದು ನನ್ನ ಕನಸು. ಇದಕ್ಕಾಗಿಯೇ ಉಚಿತ ತರಬೇತಿ ಏರ್ಪಡಿಸಿದ್ದೇನೆ. ಬೋಧಕರು ಕನಿಷ್ಠ 50 ವಿದ್ಯಾರ್ಥಿಗಳು ಉನ್ನತ ಹುದ್ದೆಯ ಪರೀಕ್ಷೆ ಪಾಸಾಗುತ್ತಾರೆ ಎಂದು ಭರವಸೆ ನೀಡಿದ್ದಾರೆ’ ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ‘ಅಧಿಕಾರಿಗಳ ಸಣ್ಣ ತಪ್ಪಿನಿಂದ 371 (ಜೆ) ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಇದನ್ನು ಸರಿಪಡಿಸಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ಅಗತ್ಯ ಬಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಿದ್ದವಿರುವುದಾಗಿ’ ತಿಳಿಸಿದರು.

‘ರುಕ್ಮಾಪುರದ ಡಾ.ಗುರುಲಿಂಗಪ್ಪ ಮಿಣಜಗಿ ನನ್ನ ವಿದ್ಯಾ ಗುರುಗಳು. ನನ್ನ ಏಳಿಗೆಯಲ್ಲಿ ಅವರ ಆಶೀರ್ವಾದ ಮತ್ತು ಸಲಹೆ ಪಾತ್ರ ಇದೆ. ಶಾಸಕ ರಾಜೂಗೌಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಇದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗುತ್ತಾರೆ’ ಎಂದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಸುಭಾಷ ಬಣಕಾರ ಅವರ ಸಂಪಾದಕತ್ವದಲ್ಲಿ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಗುರುಶಾಂತಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ, ಡಾ. ಸುರೇಶ್ ಸಜ್ಜನ್, ಕಿಶೋರಚಂದ ಜೈನ್, ಗುರುಲಿಂಗಪ್ಪ ಮಿಣಜಗಿ, ಸುರೇಂದ್ರ ನಾಯಕ, ಸುಭಾಷ ಬಣಗಾರ, ಡಾ. ಬಸವರಾಜ ಭಾವಿ, ಪ್ರೊ.ವೇಣುಗೋಪಾಲನಾಯಕ ಜೇವರ್ಗಿ, ಶಾಲೆಯ ಮುಖ್ಯಶಿಕ್ಷಕ ಲಿಂಗಯ್ಯ ಕಲ್ಲೂರಮಠ ಇದ್ದರು.

ಧಾರವಾಡ ಕೃಷಿ ವಿವಿಯ ಕುಲಪತಿ ಡಾ.ಮಹಾದೇವಪ್ಪ ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಭಂಡಾರೆ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಚಟ್ಟಿ ನಿರೂಪಿಸಿದರು. ಬಸವರಾಜ ಯಾಳಗಿ ವಂದಿಸಿದರು.

ಜವಳಿ ಪಾರ್ಕ್ ಸ್ಥಾಪಿಸಿ: ಸುರಪುರ ರುಕ್ಮಾಪುರ, ಕೊಡೇಕಲ್, ರಂಗಂಪೇಟೆ ಮತ್ತು ಇನ್ನಿತರ ಕಡೆಗಳಲ್ಲಿ ನೇಕಾರರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ರುಕ್ಮಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯಿಸಬೇಕು. ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು, ಮೂರಾರ್ಜಿ ವಸತಿ ಶಾಲೆ ಸ್ಥಾಪಿಸಬೇಕು ಎಂದು ಸಮಿತಿ ಸಂಚಾಲಕ ಚಂದ್ರಕಾಂತ ಭಂಡಾರೆ ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.