ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಬಸ್‌ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ

ಎಸ್ಸೆಸ್ಸೆಲ್ಸಿ ವಿಶೇಷ ತರಗತಿಗೆ ಹಾಜರಾಗಲು ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ

ಬಿ.ಜಿ.ಪ್ರವೀಣಕುಮಾರ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಯುತ್ತಿರುವುದು
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಯುತ್ತಿರುವುದು   

ಯಾದಗಿರಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ, ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್‌ ಸೌಲಭ್ಯ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಬೆಳಿಗ್ಗೆ ಮತ್ತು ಸಂಜೆ ವೇಳೆ ಒಂದೊಂದು ಗಂಟೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಗಣಿತ, ಇಂಗ್ಲಿಷ್‌, ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದಂತೆ ತರಗತಿಗಳು ನಡೆಯುತ್ತಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್‌ಗಳನ್ನು ನೆಚ್ಚಿಕೊಂಡು ಜಿಲ್ಲಾ, ತಾಲ್ಲೂಕು ಕೇಂದ್ರಕ್ಕೆ ಬರಬೇಕು. ಆದರೆ, ಬಸ್‌ ಕೊರತೆ ಕಾಡುತ್ತಿದೆ.

ಬೆಳಿಗ್ಗೆ 8ಕ್ಕೆ ಊರು ಬಿಡಬೇಕು: ಪ್ರತಿ ನಿತ್ಯ ಬೆಳಿಗ್ಗೆ 8ಕ್ಕೆ ವಿದ್ಯಾರ್ಥಿಗಳು ಊರು ಬಿಟ್ಟು ವಿಶೇಷ ತರಗತಿಗಳಿಗೆ ಹಾಜರಾಗಬೇಕು. ಮುಖ್ಯ ರಸ್ತೆಯಲ್ಲಿರುವ ಹಳ್ಳಿಗಳಲ್ಲಿ ಮಾತ್ರ ಬಸ್‌ ಸೌಲಭ್ಯ ಇರುತ್ತದೆ. ಆದರೆ, ಮುಖ್ಯ ರಸ್ತೆಯಿಂದ ನಾಲ್ಕೈದು ಕಿ.ಮೀ. ಒಳಗೆ ಇರುವ ಹಳ್ಳಿಗಳ ವಿದ್ಯಾರ್ಥಿಗಳು ಬಸ್‌ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.

ADVERTISEMENT

‘ವಡಗೇರಾ ತಾಲ್ಲೂಕಿನ ಹುಲಕಲ್‌ ಜೆ ಗ್ರಾಮಕ್ಕೆ ಬಸ್‌ ಇಲ್ಲ. ಮುಖ್ಯ ರಸ್ತೆಗೆ ಬರಬೇಕು. ಬಸ್‌ ಬಂದರೂ ತಂಗುದಾಣದಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಇದರಿಂದ ಬಸ್‌ ‍ಪಾಸ್‌ ಇದ್ದರೂ ಆಟೊ, ಇನ್ನಿತರ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ವಿಶೇಷ ತರಗತಿಗೂ ತಡವಾಗುತ್ತಿದೆ. ಹೀಗಾಗಿ ಹೆಚ್ಚು ಬಸ್‌ಗಳನ್ನು ನಮ್ಮ ಭಾಗಕ್ಕೆ ಓಡಾಡಿಸಬೇಕು’ ಎಂದು ಆಗ್ರಹಿಸುತ್ತಾರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಭಾಗ್ಯಶ್ರೀ ಠಾಣಗುಂದಿ.

ಬಸ್‌ ನಿಲ್ದಾಣದಲ್ಲಿ ಕಾಯುತ್ತಿರುವ ವಿದ್ಯಾರ್ಥಿಗಳು: ಶಾಲೆ–ಕಾಲೇಜು ಮುಗಿದ ನಂತರ ಕೇಂದ್ರ ಬಸ್‌ ನಿಲ್ದಾಣ, ಗ್ರಾಮಾಂತರ ಸಾರಿಗೆ ಬಸ್‌ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಆಗಮಿಸಿ ಅಲ್ಲಿಯೇ ಕಾಲ ಕಳೆಯುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿದರೆ ‘ನಮ್ಮ ಊರಿನ ಬಸ್‌ಇನ್ನೂ ಬಂದಿಲ್ಲ’ ಎನ್ನುವ ಉತ್ತರ ಸಿಗುತ್ತದೆ.

‘ಗ್ರಾಮದಿಂದ ಬೇಗ ಬರುತ್ತೇವೆ. ಸಂಜೆಯೂ ಮನೆಗೆ ತಡವಾಗಿ ತೆರಳುತ್ತೇವೆ. ಬಸ್‌ ಸಮಸ್ಯೆ ತೀವ್ರವಾಗಿದೆ. ಬಸ್‌ಗಳನ್ನು ಹೆಚ್ಚು ಓಡಿಸಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ವಿದ್ಯಾರ್ಥಿಗಳಾದ ರಾಕೇಶ, ನರಸಿಂಹ, ಸಂಗೀತಾ ಹೇಳುತ್ತಾರೆ.

ಬಿಸಿಯೂಟ ಇಲ್ಲ, ನೀರು ಇಲ್ಲ: ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಇಲ್ಲ, ನೀರಿನ ಸೌಲಭ್ಯವೂ ಇಲ್ಲದಂತಾಗಿದೆ. ಒಬ್ಬೊಬ್ಬ ವಿದ್ಯಾರ್ಥಿಗಳು ಎರಡೆರಡು ನೀರಿನ ಬಾಟಲಿಗಳನ್ನು ಹೊತ್ತುಕೊಂಡು ಬರುತ್ತಿದ್ದಾರೆ. ಜೊತೆಗೆ ಊಟದ ಡಬ್ಬಿಯನ್ನು ತರುತ್ತಿದ್ದಾರೆ.

ಹಾಸ್ಟೆಲ್‌ ವಾಸ್ತವ್ಯ ಇಲ್ಲ: ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸ್ತವ್ಯ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಓಡಾಟ ಹೆಚ್ಚಾಗಿದೆ. ರಿಯಾಯ್ತಿ ದರದಪಾಸ್‌ಗಳನ್ನು ವಿದ್ಯಾರ್ಥಿಗಳು ಹೆಚ್ಚು ತೆಗೆದುಕೊಂಡಿದ್ದಾರೆ.

‘ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಠಾಣಗುಂದಿ ವಿದ್ಯಾರ್ಥಿಗಳಿಗೆ ಬಸ್‌ ನಿಲ್ಲಿಸದೆ ಇರುವುದು ಗಮನಕ್ಕೆ ಬಂದಿತ್ತು. ಅದನ್ನು ಸರಿಪಡಿಸಲಾಯಿತು. ಈಗ ವಡಗೇರಾ ಮಾರ್ಗದಲ್ಲಿರುವ ಸಮಸ್ಯೆ ತಿಳಿದು ಬಂದಿದ್ದು, ಈ ಬಗ್ಗೆ ಗಮನಹರಿಸಿ ಪರಿಹರಿಸಲಾಗುವುದು. ಲಾಕ್‌ಡೌನ್‌ ನಂತರ ನಮ್ಮ ವಿಭಾಗದ ಸುಮಾರು 12 ಜನ ವಯೋನಿವೃತ್ತಿ, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಕೆಲವರು ನಿಧನ ಹೊಂದಿದ್ದಾರೆ. ಇದರಿಂದ ಚಾಲಕ, ನಿರ್ವಾಹಕರ ಕೊರತೆ ಇದೆ. ದೂರದ ಮಾರ್ಗಗಳಿಗೆ ಬಸ್‌ ಓಡಿಸುತ್ತಿಲ್ಲ. ವೇಗದೂತ ಬಸ್‌ಗಳನ್ನು ಗ್ರಾಮಾಂತರಕ್ಕೆ ಕಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಲಾಗುವುದು ಎನ್ನುತ್ತಾರೆ ಎನ್‌ಈಕೆಆರ್‌ಟಿಸಿ ವಿಭಾಗೀಯ ಸಂಚಾಲನಾಧಿಕಾರಿ ರಮೇಶ ಪಾಟೀಲ ಅವರು.

ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ವಿವರ

ಯಾದಗಿರಿ;94

ಶಹಾಪುರ;94

ಸುರಪುರ;72

ಗುರುಮಠಕಲ್‌;48

ಒಟ್ಟು;308

* ಗ್ರಾಮೀಣ ಪ್ರದೇಶಗಳಿಗೆ ಬಸ್ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಶಾಲಾ-ಕಾಲೇಜಿಗೆ ದಿನಾಲು ಹೋಗಲು ಆಗುತ್ತಿಲ್ಲ

- ಅನಿಲ ಕಡೇಚೂರು, ವಿದ್ಯಾರ್ಥಿ

* ಗ್ರಾಮಾಂತರ ಭಾಗಕ್ಕೆ ಪೂರ್ಣ ಪ್ರಮಾಣದ ಬಸ್‌ ಒದಗಿಸದಿರುವುದರಿಂದ ಶಾಲೆಗಳಿಗೆ ನಿಗದಿತ ಸಮಯಕ್ಕೆ ಹೋಗಿ ಸೇರಿಕೊಳ್ಳಲು ಆಗುತ್ತಿಲ್ಲ.

-ಐಶ್ವರ್ಯ ಸೌರಾಷ್ಟ್ರಹಳ್ಳಿ, ವಿದ್ಯಾರ್ಥಿನಿ

* ಸಿಬ್ಬಂದಿ ಕೊರತೆಯಿಂದ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗ್ರಾಮಾಂತರ ಭಾಗಕ್ಕೆ ಬಸ್‌ ಓಡಾಡಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ.

-ರಮೇಶ ಪಾಟೀಲ, ವಿಭಾಗೀಯ ಸಂಚಾಲನಾಧಿಕಾರಿ, ಎನ್‌ಈಕೆಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.