ADVERTISEMENT

ಗುಟ್ಟು ಬಿಟ್ಟು ಕೊಡದ ಗುರು ಪಾಟೀಲರು

ಲೋಕಸಭೆ ಚುನಾವಣೆ ಘೋಷಣೆಯಾದರೂ ಆಗಿಲ್ಲ ನಿರ್ಧಾರ; ಕಾರ್ಯಕರ್ತರಲ್ಲೂ ಗೊಂದಲ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:25 IST
Last Updated 27 ಮಾರ್ಚ್ 2024, 16:25 IST
ಗುರು ಪಾಟೀಲ ಶಿರವಾಳ
ಗುರು ಪಾಟೀಲ ಶಿರವಾಳ   

ಟಿ.ನಾಗೇಂದ್ರ

ಶಹಾಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ದಿನಾಂಕ, ಅಭ್ಯರ್ಥಿಗಳು ಘೋಷಣೆಯಾದರೂ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಅವರು ಈತನಕ ತಮ್ಮ ಗುಟ್ಟುಬಿಟ್ಟುಕೊಟ್ಟಿಲ್ಲ. ಇದರಿಂದ ಶಿರವಾಳ ಬೆಂಬಲಿಗರೂ ಗೊಂದಲದಲ್ಲಿ ಇದ್ದಾರೆ. ‘ಮುಂದೇನು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ’ ಎಂದು ಜೆಡಿಎಸ್ ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಬಿಜೆಪಿ ಟಿಕೆಟ್‌ ನಿರೀಕ್ಷಿಸಿದ್ದ ಶಿರವಾಳರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತು. ಆಗ ಸಿಡಿದ್ದೆದ್ದು ಬಂದು ಜೆಡಿಎಸ್‌ನಿಂದ ಸ್ಫರ್ಧಿಸಿದ ಶಿರವಾಳರು ಸೋಲು ಅನುಭವಿಸಿದರು. ಈಗ ಬದಲಾದ ರಾಜಕೀಯ ಸನ್ನಿವೇಶದಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅವರು ಮೌನವಾಗಿ ಉಳಿದಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕ್ರಮವೇ ಆಗಲಿ ಇಲ್ಲವೇ ಬಿಜೆಪಿ ಮುಖಂಡರ ಜೊತೆಯಲ್ಲಾಗಲಿ ಗುರುತಿಸಿಕೊಳ್ಳದೇ ಅಂತರ ಕಾಯ್ದುಕೊಂಡಿದ್ದಾರೆ.

ADVERTISEMENT

‘ಶಹಾಪುರ ಮತಕ್ಷೇತ್ರದಲ್ಲಿ ಶಿರವಾಳ ಹಾಗೂ ದರ್ಶನಾಪುರ ಕುಟುಂಬಗಳ ನಡುವೆ ರಾಜಕೀಯ ತಿಕ್ಕಾಟವಿದೆ. ಗುರು ಪಾಟೀಲ ಶಿರವಾಳ ಅವರ ತಂದೆ ದಿ.ಶಿವಶೇಖರಪ್ಪಗೌಡ ಶಿರವಾಳ ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ ಗುರು ಪಾಟೀಲ ಶಿರವಾಳ ಅವರು 2013ರಲ್ಲಿ ಶಾಸಕರಾಗಿದ್ದರು. ಸುಮಾರು 40 ವರ್ಷದ ರಾಜಕೀಯ ಅಧಿಕಾರವು ಎರಡೂ ಕುಟುಂಬಗಳ ನಡುವೆಯೇ ಗಿರಕಿ ಹೊಡೆದಿದೆ. ಶಿರವಾಳ ಅವರಿಗೆ ತಮ್ಮದೆ ಆದ ಅಭಿಮಾನಿಗಳ ಬಳಗ ಹಾಗೂ ಕಾರ್ಯಕರ್ತರ ಪಡೆ ಇದೆ. ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಜಾತಿ ಲಾಬಿಯು ಅವರ ಪರ ಸದಾ ಕೆಲಸ ಮಾಡುತ್ತದೆ. ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿದರೆ ಲಾಭ ಹಾಗೂ ರಾಜಕೀಯ ಭವಿಷ್ಯದ ಉಳಿವು ಎಂಬ ಪ್ರಶ್ನೆಯೂ ಅದರಲ್ಲಿ ಅಡಗಿದೆ’ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರ ಅಭಿಮತ.

Quote - ಸದ್ಯಕ್ಕೆ ಯಾವ ಪಕ್ಷವನ್ನೂ ಸೇರುವ ತೀರ್ಮಾನ ಮಾಡಿಲ್ಲ. ಶೀಘ್ರವೇ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಗುರು ಪಾಟೀಲ ಶಿರವಾಳ ಮಾಜಿ ಶಾಸಕ

Cut-off box - ಎಚ್.ಕೆ ಪಾಟೀಲ ಮನೆಗೆ ಬಂದಿದ್ದರು ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಉಪಾಹಾರ ಸೇವನೆಯ ನೆಪದಲ್ಲಿ ಶಿರವಾಳ ಅವರ ಮನೆಗೆ ಭೇಟಿ ನೀಡಿದ್ದರು. ಆಗ ರಾಜಕೀಯ ಚರ್ಚೆಯೂ ನಡೆದಿತ್ತು ಎನ್ನಲಾಗುತ್ತಿದೆ. ‘ಗ್ರಾಮಕ್ಕೆ ಬಂದಿದ್ದರಿಂದ ಸೌಜನ್ಯಕ್ಕಾಗಿ ಮನೆಗೆ ಕರೆದುಕೊಂಡು ಹೋಗಿರುವೆ’ ಎಂದು ಆಗ ಗುರು ಪಾಟೀಲ ಶಿರವಾಳ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಸೇರುವ ಗುಸು ಗುಸು ‘ಮಾಜಿ ಶಾಸಕರೂ ಆಗಿರುವ ಗುರು ಪಾಟೀಲ ಶಿರವಾಳ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ’ ಎಂಬ ಗುಸು ಗುಸು ಮಾತುಗಳು ಕ್ಷೇತ್ರದ ತುಂಬೆಲ್ಲ ಹರಿದಾಡುತ್ತಿವೆ. ಅಲ್ಲದೇ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಜೊತೆ ಅವರಿಗೆ ಉತ್ತಮ ಒಡನಾಟವಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ಶಿರವಾಳ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೆರೆಮರೆಯ ಯತ್ನ ನಡೆಸಿದ್ದಾರೆ’ ಎಂದು ಮಾತು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.