ADVERTISEMENT

ಪ್ರಜಾಸೌಧ ನಿರ್ಮಾಣ ಸ್ಥಗಿತ- ದರ್ಶನಾಪುರ

ಆರು ದಿನದಿಂದ ನಡೆಸುತ್ತಿದ್ದ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:33 IST
Last Updated 23 ಡಿಸೆಂಬರ್ 2025, 5:33 IST
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಆವರಣದ ಮುಂದೆ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದರು
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಆವರಣದ ಮುಂದೆ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದರು   

ಶಹಾಪುರ: ಇಲ್ಲಿನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ವಿರೋಧಿಸಿ ನಡೆಸುತ್ತಿರುವ ವಿವಿಧ ಸಂಘಟನೆಗಳ ಧರಣಿ ಸ್ಥಳಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಧರಣಿ ನಿರತರ ಜತೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಸ್ಥಗಿತಗೊಳಿಸುವೆ. ಇಲ್ಲಿನ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿದರೆ ಸಾರ್ಜನಿಕರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಿಸಲು ಮುಂದಾಗಿತ್ತು. ಇದರಲ್ಲಿ ನನ್ನದೆನು ವೈಯಕ್ತಿಕ ಆಸಕ್ತಿ ಹಾಗೂ ಇಚ್ಚೆ ಇಲ್ಲ. ಪ್ರಜಾಸೌಧಕ್ಕೆ ಬೇರೆಡೆ ಸ್ಥಳ ಗುರುತಿಸಲಾಗುವುದು’ ಎಂದು ಹೇಳಿದರು.

‘ಆದರೆ ಯಾವ ಉದ್ದೇಶಕ್ಕಾಗಿ ಧರಣಿ ನಡೆಸಿದರು ಎಂಬುವುದು ಗೊತ್ತಾಗಲಿಲ್ಲ. ಪ್ರಜಾಸೌಧ ನಿರ್ಮಾಣದಿಂದ ನನಗೇನು ಲಾಭವಿಲ್ಲ ಹಾಗೂ ನಮ್ಮ ಕುಟುಂಬದವರಿಗೆ ಅನುಕೂಲವಾಗುತ್ತದೆ ಎಂಬ ಭ್ರಮೆ ಸರಿಯಲ್ಲ. ವೈಯಕ್ತಿಕ ಜಿದ್ದಿಗೆ ಬಿದ್ದು ಪ್ರಜಾಸೌಧ ನಿರ್ಮಿಸಲು ನನಗೇನು ಆಸಕ್ತಿ ಇಲ್ಲ. ಬೇಡ ಸರಿ ಆದರೆ ರಾಜಕೀಯ ಮಾಡಿದರೆ ಸಹಿಸುವುದಿಲ್ಲ. ಪ್ರಜಾಸೌಧ ನಿರ್ಮಾಣಕ್ಕಿಂತ ಮತ್ತೊಂದು ಮುಖ್ಯವಾದ ಕಟ್ಟಡ ಯಾವುದು ಇದೆ’ ಎಂದು ಪ್ರಶ್ನಿಸಿದರು.

ADVERTISEMENT

ಸಚಿವರ ಮನವಿಗೆ ಸ್ಪಂದಿಸಿ ಧರಣಿಯನ್ನು ಕೈ ಬಿಡಲಾಗಿದೆ ಎಂದು ಧರಣಿ ನಡೆಸುತ್ತಿರುವ ರೈತ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ತಿಳಿಸಿದರು.

- ಕಾಲೇಜಿನ ಜಾಗದಲ್ಲಿ ಪ್ರಜಾಸೌಧ ಸ್ಥಗಿತಗೊಳಿಸಿದೆ. ನಾಲ್ಕು ಎಕರೆ ಪ್ರದೇಶ ಹೊಂದಿರುವ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುವುದು. ಜಾಗ ಅಂತಿಮಗೊಂಡ ಬಳಿಕ ಮರು ಟೆಂಡರ್ ಕರೆಯಲಾಗುವುದು
ಶರಣಬಸಪ್ಪ ದರ್ಶನಾಪುರ ಸಚಿವ

- ನಾಜೂಕಾಗಿ ಸಮಸ್ಯೆಗೆ ಇತಿಶ್ರೀ..!

6 ದಿನದಿಂದ ಧರಣಿ: ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬಾರದು ಎಂದು ರೈತ ಮುಖಂಡರಾದ ಮಲ್ಲಣ್ಣ ಪರಿವಾಣ ಮಹೇಶಗೌಡ ಸುಬೇದಾರ ಇಸ್ಮಾಯಿಲ್ ತಿಮ್ಮಾಪುರಿ ನೇತೃತ್ವದಲ್ಲಿ ಕಾಲೇಜು ಆವರಣದಲ್ಲಿ ಧರಣಿ ನಡೆಸಿದರು. ನಂತರ ಜೆಡಿಎಸ್ ಹಾಗೂ ಬಿಜೆಪಿ ಹಾಗೂ ಇನ್ನಿತರ ಸಂಘಟನೆಗಳು ಧರಣಿಗೆ ಬೆಂಬಲಿಸಿದರೆ ಇನ್ನೂ ಕೆಲ ಸಂಘಟನೆಗಳು ವಿರೋಧಿಸಿದವು. ತಣ್ಣಗೆ ರಾಜಕೀಯ ಕಾವು ಪಡೆಯುತ್ತಿದ್ದಂತೆ ಎಚ್ಚರಿಕೆವಹಿಸಿದ ಸಚಿವರು ಪ್ರಜಾಸೌಧ ನಿರ್ಮಾಣ ಸ್ಥಗಿತ ಎಂದು ಘೋಷಣೆ ಮಾಡುವುದರ ಮೂಲಕ ಸಮಸ್ಯೆಗೆ ನಾಜೂಕಾಗಿ ಇತಿಶ್ರೀ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.